ಆ. 15ರಂದು ಅರಣ್ಯ ಸಚಿವರಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನ ಚಾಲನೆ: ಡಿಸಿ ಸುನೀಲ್ ಕುಮಾರ್


ಆ. 15 ರಿಂದ ಜಿಲ್ಲೆಯಾದ್ಯಂತ 3.6 ಲಕ್ಷ ಗಿಡಗಳನ್ನು ನೆಡಲು ಸಿದ್ಧತೆ

ಕೊಪ್ಪಳ: ಹಸಿರು ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದಿರುವ ‘ಹಸಿರು ಕರ್ನಾಟಕ’ ಕಾರ್ಯಕ್ರಮವನ್ನು ಆ. 15 ರಿಂದ 18 ರವರೆಗೆ ಜಿಲ್ಲಾದ್ಯಂತ 153 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸುಮಾರು 3.6 ಲಕ್ಷ ಗಿಡಗಳನ್ನು ನಡೆಸಲು ಸಿದ್ಧತೆ ಕೈಗೊಳ್ಳುವುಂತೆ ನೂತನ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಸಿರು ಕರ್ನಾಟಕ ಕಾರ್ಯಕ್ರಮ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ  ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ಸಚಿವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ, ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕು. ಆ. 15 ರಂದು ಜಿಲ್ಲಾ ಉಸ್ತುವಾರಿ ಸಚಿವರು ಕೊಪ್ಪಳ ತಾಲೂಕಿನ ಕಾಸನಕಂಡಿ ಬಳಿ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ- ‘ಟ್ರೀ ಪಾರ್ಕ್’ ಅನ್ನು ಉದ್ಘಾಟಿಸುವರು. ಜೊತೆಗೆ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಇದೇ ಪಾರ್ಕಿನಲ್ಲಿ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡುವರು ಎಂದರು.

ಪ್ರಾದೇಶಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಅವರು ‘ಹಸಿರು ಕರ್ನಾಟಕ’ ಕಾರ್ಯಕ್ರಮದ ಸಮಗ್ರ ವಿವರವನ್ನು ಸಭೆಗೆ ತಿಳಿಸಿದರು. ಕೊಪ್ಪಳ ಜಿಲ್ಲೆಯನ್ನು ಹಸಿರು ಕರ್ನಾಟಕ ಕಾರ್ಯಕ್ರಮದಡಿ ಹಸಿರೀಕರಣಗೊಳಿಸಲು 3.6 ಲಕ್ಷ ಗಿಡಗಳನ್ನು ಈಗಾಗಲೆ ಅರಣ್ಯ ಇಲಾಖೆ ವಿವಿಧ ಸಸ್ಯ ಕ್ಷೇತ್ರಗಳಲ್ಲಿ ಬೆಳೆಸಿ ಸಿದ್ಧವಾಗಿರಿಸಿಕೊಂಡಿದೆ. ಆ. 15ರಂದು ಜಿಲ್ಲೆಯಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಂಡುರಂಗಪ್ಪ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ, ಜಿಲ್ಲಾ ವಾರ್ತಾಧಿಕಾರಿ ತುಕರಾಂ ರಾವ್, ಕೃಷಿ ಇಲಾಖೆ ಅಧಿಕಾರಿ ಬಸವರಾಜ್, ಸೇರಿದಂತೆ ಕೊಪ್ಪಳ, ಗಂಗಾವತಿ ಉಪವಿಭಾಗಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಪ್ಪಳ, ಮುನಿರಾಬಾದ್, ಗಂಗಾವತಿ ಮತ್ತು ಕುಷ್ಟಗಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published.