ನೇಕಾರರ ಸಾಲ ಮನ್ನಾಕ್ಕೆ ಶಾಸಕ ನಡಹಳ್ಳಿ ಒತ್ತಾಯ

ಮುದ್ದೇಬಿಹಾಳ ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ನೇಕಾರ ಒಕ್ಕೂಟ ತಾಲೂಕಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೇಕಾರರ ದಿನಾಚರಣೆ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಸನ್ಮಾನ ಸಮಾರಂಭಕ್ಕೆ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಶಾಸಕ ನಡಹಳ್ಳಿ ಹಾಗೂ ಸಮಾಜದ ಗಣ್ಯರು ಪುಷ್ಪವೃಷ್ಟಿಗೈಯ್ಯುವ ಮೂಲಕ ಚಾಲನೆ ನೀಡಿದರು.
ಮುದ್ದೇಬಿಹಾಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನೇಕಾರ ಒಕ್ಕೂಟದ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು.

ಮುದ್ದೇಬಿಹಾಳ : ರಾಜ್ಯದಲ್ಲಿ ಸಂಕಷ್ಟದಲ್ಲಿರುವ ನೇಕಾರರು ಮಾಡಿರುವ ಅಂದಾಜು 1500 ಕೋಟಿ ರೂ.ಸಾಲವನ್ನು ಮನ್ನಾ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ನೇಕಾರ ಒಕ್ಕೂಟ ತಾಲೂಕಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೇಕಾರರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಿಎಂ ಆಗುವ ಮುನ್ನ ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ನೇಕಾರರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು.ಆದರೆ ಇಂದು ರೈತರ ಸಾಲ ಮನ್ನಾ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.ರೈತರ ಸಾಲ ಮನ್ನಾದ ಘೋಷಣೆಯಾಗಿ ಎರಡುವರೆ ತಿಂಗಳಾದರೂ ಇಲ್ಲಿಯವರೆಗೆ ರೈತರಿಗೆ ಸಾಲಮನ್ನಾದ ಸೌಲಭ್ಯ ಸಿಕ್ಕಿಲ್ಲ.ಈ ಸರಕಾರದಿಂದ ಅಂಗನವಾಡಿ ಸಹಾಯಕಿಯರಿಗೆ ಮೂರು ತಿಂಗಳ ವೇತನ ನೀಡಲು ಆಗಿಲ್ಲ.ಖಜಾನೆ ಖಾಲಿ ಆಗಿದೆ ಎಂದು ಆರೋಪಿಸಿದರು.

ನೇಕಾರಿಕೆ ಇಂದು ಅಳವಿನಂಚಿನಲ್ಲಿದೆ.ಇದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೇಕಾರ ಜನಾಂಗದ ಕಲೆ ಜೀವಂತವಾಗಿಡಲು ಪ್ರತಿ ವರ್ಷ ಆ.7ರಂದು ರಾಷ್ಟ್ರೀಯ ನೇಕಾರ ದಿನಾಚರಣೆಯನ್ನಾಗಿ ಘೋಷಣೆ ಮಾಡಿದೆ.ನೇಕಾರರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಅಹಿಂಸಾ ಹೋರಾಟ ನಡೆಸಿ ಮಹಾತ್ಮಾ ಗಾಂಧೀಜಿಯವರ ಆಶಯಗಳನ್ನು ನಡೆಸಿಕೊಟ್ಟು ನಿಜವಾದ ಸೇನಾನಿಗಳಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎಂ.ಡಿ.ಕುಂಬಾರ,ಬಿಜೆಪಿ ಮಹಿಳಾ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕಿ ಸುಮಂಗಲಾ ಕೋಟಿ ಮಾತನಾಡಿ, ನೇಕಾರ ಬಾಂಧವರು ಸಂಘಟಿತರಾಗಿ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಬೇಕಿದೆ.ಮಕ್ಕಳಿಗೆ ಶಿಕ್ಷಣ ಕೊಡುವ ಕಾರ್ಯವನ್ನು ಸಮಾಜದ ಬಾಂಧವರು ಮಾಡಬೇಕು.ಒಗ್ಗಟ್ಟಿನಿಂದ ಯಾವುದೇ ಗುರಿ ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.
ಎಂ.ಡಿ.ಗುಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೇಕಾರ ಸಮಾಜದ ಮುಖಂಡರಾದ ಶಂಕ್ರಪ್ಪ ಗುಡ್ಡದ,ನಾಗಪ್ಪ ಮುದ್ದೇಬಿಹಾಳ,ಶಿವಾನಂದ ಹೆಬ್ಬಾಳ,ಈರಣ್ಣ ರಾಂಪೂರ,ಶಿವಣ್ಣ ಅಗ್ನಿ,ನೀಲಕಂಠಪ್ಪ ಅಗ್ನಿ,ಸಿದರಾಯ ರುದ್ರಗಂಟಿ,ಚನ್ನಪ್ಪಗೌಡ ಪ್ಯಾಟಿಗೌಡರ,ಸಂಗಣ್ಣ ಡಂಬಳ,ಬಸಪ್ಪ ಹುಣಶ್ಯಾಳ,ಮುದ್ದಪ್ಪ ಸಿಂಹಾಸನ ಮತ್ತಿತರರು ಇದ್ದರು.ಬನದೇವಿ ಗೌಡರ ಹಾಗೂ ವಿಜಯಲಕ್ಷ್ಮೀ ಮುದ್ದೇಬಿಹಾಳ ಸ್ವಾಗತಗೀತೆ ಹಾಡಿದರು.ಒಕ್ಕೂಟದ ತಾಲೂಕಾಧ್ಯಕ್ಷ ಬಸವರಾಜ ಚಿತ್ತರಗಿ ಸ್ವಾಗತಿಸಿದರು.ಭಾಗ್ಯಶ್ರೀ ತೆಳಗಡೆ ವಚನ ಗಾಯನ ಮಾಡಿದರು.ಶಂಕರ ಹೆಬ್ಬಾಳ ವಂದಿಸಿದರು.

ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ,ಶಿರೋಳ,ನಾಲತವಾಡ,ಬಾವೂರ,ಹಿರೇಮುರಾಳ,ಕಾಳಗಿ,ನಾಗಭೇನಾಳ,ವೀರೇಶ ನಗರ,ಹಡಲಗೇರಿ,ಬಳಗಾನೂರ,ಬಸರಕೋಡ,ಢವಳಗಿ ಸೇರಿದಂತೆ ಹಲವು ಕಡೆಗಳಿಂದ ಆಗಮಿಸಿದ್ದ ನೇಕಾರ ಸಮಾಜದ ಬಾಂಧವರು ಭಾಗವಹಿಸಿದ್ದರು.

ಮನವಿ ಸಲ್ಲಿಕೆ:
ಇದೇ ವೇಳೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ನೇಕಾರ ಸಮಾಜಕ್ಕೆ ನಗರದಲ್ಲಿ ಸುಸಜ್ಜಿತ ಸಮುದಾಯ ಭವನ,ಬಡವರಿಗೆ ಮನೆಗಳ ಮಂಜೂರಾತಿ,ಹಿರೇಮುರಾಳದ ನೀಲಕಂಠೇಶ್ವರ ಸಮುದಾಯ ನಿರ್ಮಾಣಕ್ಕೆ ಅನುದಾನ ಹಾಗೂ ಕೈಮಗ್ಗ ನೇಕಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.ಮುಂಬರುವ ಸ್ಥಳೀಯ ಸಂಸ್ಥೆಯ ಪುರಸಭೆಯ ಚುನಾವಣೆಯಲ್ಲಿ ಸಮಾಜದ ಇಬ್ಬರಿಗೆ ಪಕ್ಷದ ಟಿಕೇಟ್ ಕೊಡಲು ವಿನಂತಿಸಲಾಯಿತು.

Leave a Reply

Your email address will not be published.