ರೇಣುಕಾ ಪಾಟೀಲ ಸಾವಿಗೆ ಕಂಬನಿ ಮಿಡಿದ ಯುವ ಸಮೂಹ: ಹಂತಕರ ಬಂಧನಕ್ಕೆ ಒತ್ತಾಯ


ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ನೀಡಿದ ಹತ್ತಾರು ಸಂಘಟನೆಗಳು

ಹಾವೇರಿ:  ಕಳೆದ ಎರಡು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ರೇಣುಕಾ ಪಾಟೀಲ ಸಾವಿಗೆ ಹಾವೇರಿ ಜಿಲ್ಲೆಯಾದ್ಯಂತ ಯುವ ಸಮೂಹ ಕಂಬನಿ ಮಿಡಿಯಿತು.

ಹಂತಕರ ಬಂಧನಕ್ಕೆ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಅಕ್ಷರಶಃ ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಹೋರಾಡಿದರು.  ರೇಣುಕಾಳನ್ನು ಅಮಾನುಷವಾಗಿ ಕೊಲೆಗೈದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಕ್ಕೋತ್ತಾಯ ಮಾಡಿದರು.

ವಿದ್ಯಾರ್ಥಿ ಹಾಗೂ ಯುವ ಜನರ ಸಾಮಾಜಿಕ ಹೋರಾಟಕ್ಕೆ ಜಿಲ್ಲೆಯ ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ ಹತ್ತಾರು ಸಂಘಟನೆಗಳು ಬೆಂಬಲ ನೀಡುವ ಮೂಲಕ ರೇಣುಕಾ ಪಾಟೀಲ ಸಾವುನ್ನು ಉಗ್ರವಾಗಿ ಖಂಡಿಸಿದರು.

ಶುಕ್ರವಾರ ಅಕ್ಷರಶಃ ಯಾಲಕ್ಕಿ ಕಂಪಿನ ನಗರದಲ್ಲಿ ಬೇಕೆ – ಬೇಕು ನ್ಯಾಯ ಬೇಕು, ವಿ-ವಾಂಟ್ ಜಸ್ಟಿಸ್ ಎಂಬ ಘೋಷಣೆಗಳಿಂದ ಕೂಡಿತ್ತು. ವಿದ್ಯಾರ್ಥಿಗಳು ಕಾಲೇಜುಗಳ ತರಗತಿ ಬಹಿಷ್ಕಾರ ಮಾಡಿ, ನ್ಯಾಯಕ್ಕಾಗಿ ಬೀದಿಗಿಳಿದಿದ್ದರು. ನಗರದಲ್ಲಿ ನಾಲ್ಕು ಗಂಟೆಗೆ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಮಾಡಿ, ರೇಣುಕಾ ಪಾಟೀಲ ಸಾವುನ್ನು ಸಾಮೂಹಿಕವಾಗಿ ಖಂಡಿಸಿದರು.

ಬೆಳ್ಳಂ – ಬೆಳ್ಳಿಗ್ಗೆ ನಗರದ ಜಿ.ಎಚ್.ಕಾಲೇಜು ಮುಂಭಾಗದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ನೇತೃತ್ವದಲ್ಲಿ ಬೀದಿಗಿಳಿದ ನಗರದ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಜಿ.ಎಚ್.ಕಾಲೇಜು ವಿದ್ಯಾರ್ಥಿನಿ, ತಮ್ಮ ಸಹೋದರಿ ರೇಣುಕಾಳ ಸಾವುನ್ನು ಖಂಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿನಿಯರು ರೇಣುಕಾಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಗಲ್ಲಿಗೆ ಏರಿಸುವಂತೆ ಘೋಷಣೆ ಕೂಗಿ, ಹಳೆಯ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದರು. ಸರಕಾರಿ ಪ.ಪೂ.ಕಾಲೇಜು ವಿದ್ಯಾರ್ಥಿನಿಯರ ಹೋರಾಟಕ್ಕೆ ಬೆಂಗಾವಲಾಗಿ ಬಂದ ಜಿ.ಎಚ್.ಕಾಲೇಜಿನ ವಿದ್ಯಾರ್ಥಿಗಳು-ವಿದ್ಯಾರ್ಥಿನಿಯರು ಒಟ್ಟಿಗೆ ಸೇರಿ ರೇಣುಕಾಳ ಸಾವುನ್ನು ಖಂಡಿಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್.ಎಫ್.ಐ. ಜಿಲ್ಲಾಧ್ಯಕ್ಷ ಸುಭಾಸ ಎಂ. ಮಾತನಾಡಿ, ಮೆಲ್ನೋಟಕ್ಕೆ ರೇಣುಕಾಳ ಸಾವು ಬರಿ ಹತ್ಯೆಯಂತೆ ಕಾಣುತ್ತಿಲ್ಲ. ಸಾಮೂಹಿಕ ಅತ್ಯಾಚಾರ ಮಾಡಿ ಬಳಿಕ ಅಮಾನುಷ್ಯವಾಗಿ ಹತ್ಯೆ ಮಾಡಲಾಗಿದೆ ಎಂಬ ಅನುಮಾನ ಇದೆ. ಅರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾದ ರೇಣುಕಾ ಪಾಟೀಲ ದೇಹವನ್ನು ನೋಡಿದರೆ ಸಾವಿನ ಭೀಕರತೆ ಕಾಣುತ್ತದೆ. ದೆಹಲಿಯ ನಿರ್ಭಯಾ ಹತ್ಯೆಯ ನಂತರ ರೇಣುಕಾ ಸಾವು ಸಹ ಅಷ್ಟೇ ಭೀಕರತೆಯಿಂದ ಕೂಡಿದೆ. ಅಲ್ಲದೇ ಕಳೆದ 15 ದಿನಗಳ ಹಿಂದೆ ರಾಜ್ಯದ ಮಾಲೂರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಪರಿಸಿ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದರು. ಆ ಘಟನೆ ಮರೆಯಾಗುವ ಮುನ್ನವೇ ಈ ರೀತಿಯ ಹೇಯ ಕೃತ್ಯ, ಹಾವೇರಿಯಲ್ಲಿ ನಡೆದಿರುವದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತರಾಗಿ ಸಹೋದರಿ ರೇಣುಕಾಳನ್ನು ಹತ್ಯೆ ಮಾಡಿದ ಪಾಪಿಗಳನ್ನು ಬಂಧಿಸಿ ಕಠಿಣ ಶಿಕ್ಷ ವಿಧಿಸಬೇಕು ಎಂದು ಆಗ್ರಹಿಸಿದರು.

ಇದಾದ ಬಳಿಕ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಕೆ.ಎಲ್.ಇ. ಸಂಸ್ಥೆಯ ಜಿ.ಎಚ್. ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಂಬಂಧಿಗಳು ಕಾಲೇಜಿನಿಂದ ಸಿದ್ದಪ್ಪ ವೃತ್ತದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ತಮ್ಮ ಕಾಲೇಜಿನ ಸಹಪಾಠಿ ರೇಣುಕಾಳನ್ನು ಅಮಾನುಷವಾಗಿ ಹತ್ಯೆ ಮಾಡಿದರನ್ನು ಬಂಧಿಸಬೇಕು, ಅವರನ್ನು ಸಾಮೂಹಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಘೋಷಣೆ ಕೂಗಿದರು.

ಸುಮಾರು 1.5 ಕಿ.ಮಿ ಉದ್ದಕ್ಕೂ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ವಿ- ವಾಂಟ್ ಜಸ್ಟಿಸ್ ಎಂಬ ಘೋಷಣೆಗಳನ್ನು ಮೋಳಗಿಸಿದರು. ಬಳಿಕ ನಗರದ ಸಿದ್ಧಪ್ಪ ವೃತ್ತದಲ್ಲಿ ಸುಮಾರು 2000 ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸಿ ರೇಣುಕಾಳ ಸಾವುನ್ನು ಖಂಡಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಡಿ.ಶಿರೂರು, ಸೇರಿದಂತೆ ಎಲ್ಲ ಪದಾಧಿಕಾರಿಗಳು, ಎಲ್ಲ ಉಪನ್ಯಾಸಕರು, ಸಿಬ್ಬಂಧಿಗಳು ಕಪ್ಪ ಪಟ್ಟಿ ಧರಿಸಿ ವಿದ್ಯಾರ್ಥಿನಿಯ ಸಾವುನ್ನು ಖಂಡಿಸಿದರು. ಜೊತೆಗೆ ಪೊಲೀಸ್ ಇಲಾಖೆ ತಕ್ಷಣ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಪರವಾಗಿ ಕಾಲೇಜಿನ ಪ್ರಾಚಾರ್ಯ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಡಿ,ಶಿರೂರು ಅವರು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆರೋಪಿಗಳನ್ನು ತ್ವರಿತ ಗತಿಯಲ್ಲಿ ಬಂಧಿಸಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

Leave a Reply

Your email address will not be published.