ಗಜೇಂದ್ರಗಡ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಗೆ ಮನವಿ


ಗಜೇಂದ್ರಗಡ: ರೈತ, ಕಾರ್ಮಿಕ, ಕೃಷಿ ಕೂಲಿಕಾರ ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ಹಾಗೂ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಸದಸ್ಯರು ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ವೇಳೆ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ದೇಶದಲ್ಲಿ ಅಚ್ಛೆದಿನ್ ನಿರೀಕ್ಷೆಯಲ್ಲಿದ್ದ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರು ನಾಲ್ಕು ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ದೇಶದಲ್ಲಿ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಕೃಷಿ ಲಾಭದಾಯಕವಾಗುತ್ತಿಲ್ಲ ಎನ್ನುವುದನ್ನು ಮನಗಂಡಿದ್ದಾರೆ. ದೊಡ್ಡ, ಸಣ್ಣ ಅತೀ ಸಣ್ಣ ರೈತರು ಸಾಲ ಬಾಧೆಯಿಂದ ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರಕಾರ ರೈತರ ಸಾಲ ಮನ್ನಾದ ಬಗ್ಗೆ ತಿರ್ಮಾನ ತೆಗೆದುಕೊಂಡಿದ್ದರೂ ಸಹ ಗೊಂದಲವಾಗಿದೆ. ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕಗಳಲ್ಲಿರುವ ರೈತರ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದರೂ ಸಹ ಕೇಂದ್ರ ಮಾತ್ರ ಇದಕ್ಕೂ ನಮಗು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಸರಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ರೈತರ ಫಸಲುಗಳಿಗೆ ಲಾಭದಾಯಕ ಬೆಲೆ ಖಾತ್ರಿಪಡಿಸುವ ಡಾ. ಎಂ.ಎಸ್.ಸ್ವಾಮಿನಾಥನ್ ವರದಿ ಸಿಫಾರಸ್ಸುಗಳನ್ನು ಜಾರಿಗೊಳಿಸಲಾಗುವುದು ಎಂದು ನೀಡಿದ ಭರವಸೆ ಹುಸಿಯಾಗಿದೆ. ಹೀಗಾಗಿ ಆ. 14 ರಂದು ಅಹೋರಾತ್ರಿ ಜಾಗರಣೆ ಮಾಡಲಾಗುವದು ಜೊತೆಗೆ ಸೆ. 5 ರಂದು ದೆಹಲಿ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾರ್ಮಿಕ ಜಿಲ್ಲಾ ಮುಖಂಡ ಪೀರು ರಾಠೋಡ, ಥಾವರೆಪ್ಪ ರಾಠೋಡ, ಬೀರಪ್ಪ ಜಕ್ಕಲಿ, ದುರಗಪ್ಪ ಎಂ, ಆರ್, ಚನ್ನಪ್ಪ ಗುಗಲೊತ್ತರ, ರೂಪೇಶ ಮಾಳೋತ್ತರ, ವೀರೆಶ ರಾಠೋಡ, ಲಾಲವ್ವ ರಾಠೋಡ, ನೀಲವ್ವ ಅಜಮೀರ, ಲಕ್ಷ್ಮವ್ವ ರಾಠೋಡ, ಲೋಕಪ್ಪ ರಾಠೋಡ, ಸೋಮವ್ವ ಮಾಳೋತ್ತರ, ಚಂದ್ರವ್ವ ಮಾಳೋತ್ತರ, ಕೇಶವ್ವ ಗುಗಲೊತ್ತರ ಇತರರು ಇದ್ದರು.

Leave a Reply

Your email address will not be published.