ಅಡುಗೆಯವರಿಗೆ ಪ್ರೋತ್ಸಾಹ ನೀಡಲು ಶೀಘ್ರ ಆಹಾರ ಮೇಳ: ಶಾಸಕ ಸತೀಶ ಜಾರಕಿಹೊಳಿ ಘೋಷಣೆ


ಯಮಕನಮರಡಿ :ಉತ್ತಮ ತಯಾರಕರಿಗೆ  ಪ್ರೋತ್ಸಾಹಿಸಲು ಹುಕ್ಕೇರಿ ತಾಲೂಕಿನಲ್ಲಿ ಶೀಘ್ರವೇ ಆಹಾರ  ಉತ್ಸವ ಸಂಘಟಿಸಲಾಗುವುದು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಹತ್ತರಕಿಯಲ್ಲಿ ಹುಕ್ಕೇರಿ ತಾಲೂಕಿನ ಅಕ್ಷರ ದಾಸೋಹ ಕಾರ್ಯಕ್ರಮದಡಿ ಅತ್ಯುತ್ತಮ ಅಡುಗೆ ಕೇಂದ್ರ ಪ್ರಶಸ್ತಿ ಹಾಗೂ ಅನ್ನದಾಸೋಹ ಸಿಬ್ಬಂದಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳ ಬಿಸಿಯೂಟ ಯೋಜನೆಯಲ್ಲಿ ಅಡುಗೆ ಸಿಬ್ಬಂದಿಯ ಸೇವೆ ಅನನ್ಯವಾದುದು. ಅವರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಕೇವಲ ಅನ್ನ-ಸಾಂಬಾರು ಒದಗಿಸಬೇಕೆಂದು ಸರಕಾರ ಹೇಳಿದ್ದರೂ ತಮ್ಮ ಕ್ಷೇತ್ರ ವ್ಯಾಪ್ತಿಯ ಅಡುಗೆ ಸಿಬ್ಬಂದಿ ಇದ್ದುದರಲ್ಲಿಯೇ ಬಗೆ ಬಗೆಯ ಆಹಾರ ತಯಾರಿಸುವ ಮೂಲಕ ಮಕ್ಕಳನ್ನು ಶಾಲೆಗಳಿಗೆ ಆಕರ್ಷಿಸಲು ನೆರವಾಗಿರುವುದು ಶ್ಲಾಘನೀಯ  ಎಂದು ಅವರು ಹೇಳಿದರು.

ಅಡುಗೆ ತಯಾರಕರ ಕೌಶಲ್ಯವನ್ನು ಪ್ರೋತ್ಸಾಹಿಸುವ ಕಾರಣಕ್ಕೆ ಶೀಘ್ರದಲ್ಲಿಯೇ ಆಹಾರ ಮೇಳ ಆಯೋಜಿಸಿ, ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.

ಅಡುಗೆ ತಯಾರಕರು ಸರಕಾರಿ ಶಾಲೆಗಳ ಸೇವೆಗಷ್ಟೇ ಮೀಸಲಾಗದೇ ಮನೆಯಲ್ಲೂ ಅಡುತೆ ಮತ್ತು ಇತರೆ ಆಹಾರ ಪದಾರ್ಥಗಳನ್ನು ತಯಾರಿಸಿ ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕೆಂದೂ ಅವರು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣವಾಗುತ್ತಿರುವುದು ಖೇದಕರ. ಬಡವರು, ದುರ್ಬಲ ವರ್ಗದವರೇ ಹೆಚ್ಚಾಗಿ ಪ್ರವೇಶ ಪಡೆಯುವ ಸರಕಾರಿ ಶಾಲೆಗಳನ್ನು ಮುಚ್ಚಲು ಕೊಡಬಾರದು. ಅದಕ್ಕೆಂದೇ ಗುಣಮಟ್ಟದ ಊಟ, ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಆಕರ್ಷಿಸಲು ಒತ್ತು ನೀಡಬೇಕೆಂದು ಅವರು ಮನವಿ ಮಾಡಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಷ್ಟೇ ಏಕೆ ರಾಜ್ಯಮಟ್ಟದಲ್ಲಿಯೂ ಸರಕಾರಿ ಶಾಲೆಗಳಿಗೆ ಕಟ್ಟಡಗಳ ಕೊರತೆ ಇದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಾವು ಈ  ಬಗ್ಗೆ ಕಾಳಜಿ ವಹಿಸಿದ್ದು, ಶಾಲೆಗಳಿಗೆ ಬೇಕಾದ ಡೆಸ್ಕು, ಕಂಪ್ಯೂಟರ್, ಕ್ರೀಡಾ-ವಿಜ್ಞಾನ ಸಾಮಗ್ರಿಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಒದಗಿಸಿರುವುದಾಗಿ ಅವರು ಹೇಳಿದರು.

ಈ ಬಾರಿಯೂ ಸಹ ಹೊಸ ಕಟ್ಟಡ ನಿರ್ಮಾಣದೊಂದಿಗೆ ಡೆಸ್ಕು, ಕಂಪ್ಯೂಟರ್ ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸಲು  ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಅವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿಯವರನ್ನೂ ಅಕ್ಷರ ದಾಸೋಹ ಸಿಬ್ಬಂದಿ ಸನ್ಮಾನಿಸಿ, ಅಭಿನಂದಿಸಿದರು.

ಬಿಇಒ ಉಮಾದೇವಿ ಬಸಾಪುರೆ, ಚಿಕ್ಕೋಡಿ ಶೈಕ್ಷಣಿಕ  ಜಿಲ್ಲಾ ಅಕ್ಷರ ದಾಸೋಹ ಸಂಯೋಜಕ ಜಿ.ಬಿ. ಬಳಿಗಾರ, ತಾಲೂಕು ಪಂಚಾಯ್ತಿ ಅಧ್ಯಕ್ಷ ದಸ್ತಗೀರ ಬಸ್ಸಾಪುರೆ,ಎಸ್.ಎಸ್ . ಹಾಲದೇವರಮಠ, ಜಿಲ್ಲಾ ಪಂಚಾಯ್ತಿ ಸದಸ್ಯ ಫಕೀರವ್ವ ಹಂಚಿನಮನಿ, ತಾ.ಪಂ. ಸದಸ್ಯೆ ಶೋಭಾ ಜರ್ರೆ, ಬಾಳಪ್ಪ ಅಕ್ಕತಂಗೇರಹಾಳ, ಸುರೇಶ ಬೆಣ್ಣಿ, ಹತ್ತರಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹದೇವ ಪಟೋಳಿ ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.