ದೋಸ್ತಿ ಸರಕಾರದಿಂದ ಏನೇನೂ ಅಭಿವೃದ್ಧಿಯಾಗಿಲ್ಲ; ಬಿಎಸ್ ವೈ ಕಟುಟೀಕೆ


ಬಳ್ಳಾರಿ:ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಪ್ರತಿಪಕ್ಷ ನಾಯಕ, ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೂಷಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ನಡೆಸಿರುವ ಯಡಿಯೂರಪ್ಪ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವರ ನೇಮಕ, ಸಾಲ ಮನ್ನಾ ವಿಷಯದಲ್ಲಿ ಅನಗತ್ಯ ವಿಳಂಬ ಮಾಡಲಾಯಿತು ಎಂದು ಆರೋಪಿಸಿದರು.

ಬಳ್ಳಾರಿಯಲ್ಲಿ ಈ ವರ್ಷ 6 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೂ ಪರಿಹಾರ ನೀಡಲು ಸರಕಾರ ಮುಂದಾಗಿಲ್ಲ. ಕುಡಿಯೋ ನೀರಿಗೆ ಬರ ಇದ್ದು, ದನಕರುಗಳು ಮೇವಿಲ್ಲದೇ ತೊಂದರೆಗೆ ಒಳಗಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಎಂದೂ ಅವರು ಆರೋಪಿಸಿದರು.

ಪೌರಕಾರ್ಮಿಕರು, ಅಂಗನವಾಡಿ ನೌಕರರ ವೇತನದಲ್ಲಿ ವಿಳಂಬವಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲಸ ಪೂರ್ಣಗೊಂಡಿಲ್ಲ. ವಿದ್ಯುತ್ ಸಮಸ್ಯೆ ಇರುವ ಜತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿದೆ ಎಂದು ಯಡಿಯೂರಪ್ಪ ದೂಷಿಸಿದರು.

ಬಳ್ಳಾರಿಗೆ ಡಿ.ಕೆ. ಶಿವಕುಮಾರ್ ಉಸ್ತುವಾರಿ ಸಚಿವರಾಗಿದ್ದಾರೆ. ಮುಂದೇನಾಗುತ್ತದೆಯೋ ಕಾದು ನೋಡೋಣ. ಸಿಎಂ ಭತ್ತ ನಾಟಿ ಮಾಡೋದು ಹಾಸ್ಯಾಸ್ಪದ. ನಾಟಿ ಮಾಡಿ ಶೋ ಕೊಡುವ ಬದಲು ರೈತರ ಸಂಕಷ್ಟಗಳಿಗೆ ಸ್ಪಂದಿಸಲಿ ಎಂದು ಸಲಹೆ ಮಾಡಿದರು.

ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಜೊತೆ ಚರ್ಚಿಸುತ್ತೇನೆ-ಬಿಜೆಪಿ ಸೋಲಲು ಕಾರಣವೇನು?- ಎನ್ನೋದರ ಕುರಿತು ಚರ್ಚಿಸುವೆ. ದೇಶದ ಪ್ರಧಾನಿ ಮೋದಿ ಅವರು ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ಗಟ್ಟಿಯಾಗಿ ನಿಂತು ರಾಜ್ಯದಲ್ಕಿ ಪಕ್ಷ ಕಟ್ತೇವೆ. ಶ್ರೀರಾಮುಲು ಪದೇ ಪದೇ ರಾಜೀನಾಮೆ ನೀಡಿ ಚುನಾವಣೆ ಎದುರಿಸ್ತಿದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಜನಾರ್ದನ ರೆಡ್ಡಿ ಸಕ್ರಿಯರಾಗಿ ಪಾಲ್ಗೊಳ್ಳೊ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ ಎಂದೂ ಅವರು ಹೇಳಿದರು. ಶೋಭಾ ಕರಂದ್ಲಾಜೆ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published.