ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಾನು ಮಾತನಾಡುವುದಿಲ್ಲ ಎಂದು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ರಮೇಶ ಜಾರಕಿಹೊಳಿಗೆ ಇಂದು ತಿರುಗೇಟು ನೀಡಿದಂತೆ ಮಾತನಾಡರುವ ಡಿಕೆಶಿ, ರಮೇಶ ಜಾರಕಿಹೊಳಿ ತನ್ನ ಬೆಸ್ಟ್ ಫ್ರೆಂಡ್ ಎಂದು ಬಣ್ಣಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿದ್ದ ಜಾರಕಿಹೊಳಿ ಸಹೋದರರು ರಾಜ್ಯ ರಾಜಕೀಯದಲ್ಲಿ ಕೆಲವು ದಿನಗಳಿಂದ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ ಬೆಂಬಲಕ್ಕೆ ನಿಲ್ಲುವ ಮೂಲಕ ಡಿಕೆಶಿ ಬೆಳಗಾವಿ ಜಿಲ್ಲೆ ವಿಷಯದಲ್ಲಿ ಅನಗತ್ಯ ಮೂಗು ತೂರಿಸುತ್ತಿದ್ದಾರೆ ಎಂದು ಜಾರಕಿಹೊಳಿ ಬ್ರದರ್ಸ್ ಬಹಿರಂಗವಾಗಿಯೇ ಆರೋಪಿಸಿದ್ದರು. ಇದು ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳನ್ನೂ ತೋರಿಸಿತ್ತು.
ಈ ನಡುವೆ ರಮೇಶ ಜಾರಕಿಹೊಳಿಯವರನ್ನು ಮಾತನಾಡಿಸಲು ಡಿಕೆಶಿ ನಿನ್ನೆ ಪ್ರಯತ್ನಿಸಿದ್ದಾಗ ಮಾತನಾಡುವುದಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಆದರೆ, ಇಂದು ಡಿಕೆಶಿ ತಾವೇ ಖುದ್ದಾಗಿ ರಮೇಶ ಜಾರಕಿಹೊಳಿ ಅವರೊಂದಿಗೆ ಮಾತನಾಡುವುದಾಗಿ ಹೇಳಿಕೆ ನೀಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ರಮೇಶ ಜಾರಕಿಹೊಳಿ ಸಂಕಷ್ಟ ಕಾಲದಲ್ಲಿದಾಗ ತಾವು ಅವರ ಬೆನ್ನಿಗೆ ಕಲ್ಲುಬಂಡೆಯಂತೆ ನಿಂತಿದ್ದೆ. ಈಗ ಅವರ ನಿವಾಸಕ್ಕೆ ತಾವೇ ಹೋಗಿ ಮಾತನಾಡುವುದಾಗಿ ಡಿಕೆಶಿ ಹೇಳಿರುವುದು ವಿಶೇಷ.
Hi