ನಾಳೆ ಸುವರ್ಣಸೌಧದಲ್ಲಿ ಗೋಕಾಕ ಜಿಲ್ಲಾ ಘೋಷಣೆ ಸಿಎಂಗೆ ಒತ್ತಾಯಿಸಲಾಗುವುದು
ಗೋಕಾಕ: ಆಡಳಿತ ಹಾಗೂ ಅಭಿವೃದ್ದಿಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ- ಚಿಕ್ಕೋಡಿ ಎರಡು ಜಿಲ್ಲೆಗಳನ್ನಾಗಿಸುವ ಸಮಯ ಈಗ ಒದಗಿ ಬಂದಿದೆ ಎಂದು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷರು, ಶೂನ್ಯ ಸಂಪದನಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ನಗರದ ಶೂನ್ಯ ಸಂಪದನಾ ಮಠದಲ್ಲಿ ಗುರುವಾರ ನ್ಯಾಯವಾದಿಗಳ ಸಂಘ, ಗೋಕಾಕ ಜಿಲ್ಲಾ ಹೋರಾಟ ಸಮಿತಿ, ವಿವಿಧ ಪಕ್ಷಗಳ ಹಾಗೂ ಸಂಘಟನೆಗಳು ಮುಖಂಡರು, ಜನಪ್ರತಿನಿಧಿಗಳ ನೇತ್ರತ್ವದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ಜಿಲ್ಲಾ ವಿಭಜನೆಗೆ ಒಲವು ತೋರಿಸುತ್ತಿರುವುದನ್ನು ಸ್ವಾಗತಿಸಿದ ಅವರು, ನಾಳೆ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ 2 ಗಂಟೆಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಗೋಕಾಕ ಜಿಲ್ಲೆಯಾಗಿ ಘೋಷಿಸಬೇಕೆಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಗುವುದು. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಜನತೆ ಅಭಿಮಾನದಿಂದ ಹಾಗೂ ಸ್ವ-ಇಚ್ಚೆಯಿಂದ ಆಗಮಿಸಬೇಕೆಂದು ಕರೆ ನೀಡಿದರು.
ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಕಳೆದ 30 ವರ್ಷಗಳಿಂದ ನಿರಂತರ ಗೋಕಾಕ ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದೇವೆ. ಎಲ್ಲ ಆಯೋಗಗಳು ಗೋಕಾಕ ಜಿಲ್ಲೆಯನ್ನಾಗಿ ಮಾಡುವಂತೆ ತಮ್ಮ ವರದಿಯಲ್ಲಿ ತಿಳಿಸಿವೆ. ಎಲ್ಲ ದೃಷ್ಟಿಯಿಂದಲೂ ಬೆಳಗಾವಿಯ ನಂತರ ಗೋಕಾಕ ಪ್ರಾಮುಖ್ಯತೆಯನ್ನು ಪಡೆದಿದೆ. ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಿ ಅಭಿವೃದ್ದಿ ದೃಷ್ಟಿಯಿಂದ ಗೋಕಾಕ ಜಿಲ್ಲೆಯನ್ನಾಗಿ ಮಾಡುವುದು ಅತಿ ಅವಶ್ಯವಾಗಿದೆ ಎಂದ ಅವರು ಜಿಲ್ಲಾ ವಿಭಜನೆಯನ್ನು ಕೇವಲ ಭಾವನಾತ್ಮಕವಾಗಿ ನೋಡದೇ ಅಭಿವೃದ್ದಿ ದೃಷ್ಠಿಯಿಂದ ನೋಡಬೇಕಾಗಿದೆ. ಗಡಿ ಸಮಸ್ಯೆಯ ಬಗ್ಗೆ ಹೆಚ್ಚಿನ ಒಲವು ತೋರಿಸದೇ ಸಮಸ್ಯೆ ಬಂದಾಗ ನಾವೆಲ್ಲ ಎಂತಹ ಹೋರಾಟಕ್ಕೂ ಸಿದ್ದರಾಗಿದ್ದೇವೆ.ನಾವು ಬೆಳಗಾವಿಯ ಜನತೆಯ ಜೊತೆ ಇದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎ.ಕೋತವಾಲ, ಅಶೋಕ ಪಾಟೀಲ, ಕುಬೇಂದ್ರ ಕಲಾಲ, ದಸ್ತಗೀರ ಪೈಲವಾನ, ಅಬ್ಬಾಸ್ ದೇಸಾಯಿ, ನ್ಯಾಯವಾದಿಗಳ ಸಂಘದ ಡಿ.ವಾಯ್.ಖಂಡೆಪಟ್ಟಿ, ಸಿ.ಬಿ.ಗಿಡ್ನನವರ, ಸಿ.ಡಿ.ಹುಕ್ಕೇರಿ, ಎಲ್.ಎನ್.ಬೂದಿಗೊಪ್ಪ, ಗಿರೀಶ ನಂದಿ, ಡಿ.ಎಮ್.ಮಡಿವಾಳರ ಮೂಡಲಗಿ ನ್ಯಾಯವಾದಿ ಸಂಘದ ಕೆ.ಎಲ್.ಹುಣಶ್ಯಾಳ ಸೇರಿದಂತೆ ನಗರ ಸಭೆ ಹಾಲಿ ಹಾಗೂ ಮಾಜಿ ಸದಸ್ಯರು, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಇದ್ದರು.