ಕೋಲಿ ಸಮಾಜಕ್ಕೆ 2 ನಿಗಮ ಮಂಡಳಿ, ಎಂಎಲ್ ಸಿ ಸ್ಥಾನ ನೀಡಲು ಒತ್ತಾಯಿಸುವೆ:ಶಾಸಕ ಬಿ. ನಾರಾಯಣ


ಕಲಬುರಗಿ: ಕೋಲಿ ಸಮಾಜಕ್ಕೆ ನಿರಂತರವಾಗಿ ರಾಜಕೀಯ ಅನ್ಯಾಯವಾಗಿದೆ. ಅದನ್ನು ನಮ್ಮವರೇ ಮಾಡಿರುವುದು ದುರಂತ. ನನಗೆ ಮಕ್ಕಳಿಲ್ಲ, ನೀವೇ ಮಕ್ಕಳು ಎನ್ನುತ್ತ, ಜೀವ ಕೊಡ್ತೀನಿ, ಆಸ್ತಿ ಕೊಡ್ತೀನಿ ಎನ್ನುತ್ತಲೇ ಸಮಾಜಕ್ಕೆ ಸಿಗುವ ಎಲ್ಲ ಸೌಕರ್ಯಗಳನ್ನು ಒಬ್ಬರೇ ಅನುಭವಿಸಿರುವುದು ನಮ್ಮ ಸಮಾಜದ ರಾಜಕೀಯ ಅಂಗವೈಕಲ್ಯಕ್ಕೆ ಕಾರಣವಾಗಿದೆ.  ನಾನು ಕಾಡಿ ಬೇಡಿಯಾದರೂ ಈ ಬಾರಿ ಒಂದು ಎಂಎಲ್‍ಸಿ, ಎರಡು ನಿಗಮ ಮಂಡಳಿಗೆ ಸ್ಥಾನವನ್ನು ಸಮಾಜಕ್ಕೆ ತಂದು ಕೊಡುವುದಾಗಿ ಬಸವಕಲ್ಯಾಣ ಶಾಸಕ ಬಿ.ನಾರಾಯಣ ವಾಗ್ಧಾನ ಮಾಡಿದರು.

ಇಲ್ಲಿನ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಜಿಲ್ಲಾ ಕೋಲಿ ಸಮಾಜ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಪಕ್ಕದ ಬೀದರ್  ಜಿಲ್ಲೆಯಲ್ಲಿ ಟೋಕರೆ ಕೋಳಿ, ಕೋಳಿ, ಗೊಂಡ ಜಾತಿಗಳಿಗೆ ಎಸ್ಟಿ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಇದನ್ನು ಗುಲ್ಬರ್ಗ ಜಿಲ್ಲೆಯಲ್ಲಿ ಪಡೆಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಶೀಘ್ರವೇ ಮುಖ್ಯಮಂತ್ರಿಗಳು ಭೇಟಿ ಮಾಡಲಾಗುವುದು, ಅಲ್ಲದೇ ದೆಹಲಿಗೆ ನಿಯೋಗ ಕರೆದೊಯ್ದು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಲು ಮನವಿ ಮಾಡಲಾಗುವದು ಎಂದೆರು.

ಮೊದಲು ನಮ್ಮ ಸಮಾಜದ ಮುಖಂಡರು ಕಂಡಕಂಡ ರಾಜಕಾರಣಿಗಳ ಮನೆ ಮುಂದೆ ಗೇಟು ಕಾಯವುದು ಬಿಡಬೇಕು. ಇನ್ನೊಬ್ಬರ ಮನೆ ಗೇಟ್ ಕಾಯುವುದರಿಂದ ನಮಗೆ ಯಾವ ಸೌಲಭ್ಯವೂ ದೊರೆಯುವುದಿಲ್ಲ. ಸಮಾಜದ ಸಂಘಟನೆಯ ದೃಷ್ಟಿಯಿಂದ ರಾಜ್ಯ ಮಟ್ಟದಿಂದ ತಾಲೂಕು ಮಟ್ಟದವರೆಗೂ ಕೋಲಿ ಸಮಾಜದ ಘಟಕಗಳನ್ನು ರೀಪ್ರೇಸ್ ಮಾಡಿ ಹೊಸ ತಲೆಮಾರಿನ ಯುವ ಶಕ್ತಿಗಳನ್ನು ಸಂಘಟನೆಗಾಗಿ ತಯಾರು ಮಾಡೋಣ ಅದಕ್ಕಾಗಿ ಡಿಸೆಂಬರ್ ಒಳಗೆ ಎಲ್ಲವೂ ಸರಿ ಮಾಡಿ, ಲೋಕಸಭೆ ಚುನಾವಣೆಗೂ ಮುನ್ನ ಎಸ್ಟಿ ಮಾಡಲು ಒತ್ತಡ ಹೇರೋಣ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಈ ಕುರಿತು ಆಸಕ್ತಿ ಇದ್ದು, ಕೆಲಸ ಮಾಡಿಸಿಕೊಳ್ಳೋಣ ಎಂದರು.

ಕಾರ್ಯಕ್ರಮ ಸಂಯೋಜಕ ಹಾಗೂ ಕೋಲಿ ಸಮಾಜ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ್, ಕೋಲಿ ಸಮಾಜದ ಹಿರಿಯರಾದ ಶಿವಶರಣಪ್ಪ ಕೋಬಾಳ ಹಾಗೂ ಹಿರಿಯ ದಲಿತ ಮುಖಂಡ ವಿಠ್ಠಲ ದೊಡ್ಡಮನಿ ಮಾತನಾಡಿದರು.

ತೊನಸನಳ್ಳಿಯ ಅಲ್ಲಮಪ್ರಭು ಸಂಸ್ಥಾನ ಮಠದ ಮಲ್ಲಣ್ಣಪ್ಪ ಮುತ್ಯಾ ಸಾನ್ನಿಧ್ಯವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ, ಮೇಯರ್ ಶರಣಕುಮಾರ ಮೋದಿ, ಕೋಲಿ ಸಮಾಜದ ವಿಜಯಪುರ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಹಳ್ಳಿಖೇಡದ ದತ್ತಾತ್ರೇಯ ಗುರೂಜಿ, ಶ್ರೀಮತಿ  ನಾರಾಯಣರಾವ್, ಶಿವಲಿಂಗಪ್ಪ ಕಿನ್ನೂರ್, ಭೀಮಣ್ಣ ಸಾಲಿ, ತಿಪ್ಪಣ್ಣ ರೆಡ್ಡಿ, ಆರ್.ಎಂ.ನಾಟೀಕಾರ ಇತರರು ಇದ್ದರು.

Leave a Reply

Your email address will not be published.