ಕಲಬುರಗಿ ಬಂದ್ ಯಶಸ್ವಿ: ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ


ಕಲಬುರಗಿ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷ, ಐದು ತಿಂಗಳ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ” ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
 
ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ” ಭಾರತ್ ಬಂದ್” ಅಂಗವಾಗಿ ನಗರದಲ್ಲಿಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಪ್ರದರ್ಶನದ ವೇಳೆ ಮಾತನಾಡಿದ ಖರ್ಗೆ ಅವರು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ದೇಶದ ಬಡವರು, ರೈತರು ಮತ್ತು ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲ. ಬಡವರು, ಶೋಷಿತರ ಮೇಲೆ ಅನ್ಯಾಯ, ಅತ್ಯಾಚಾರ  ನಡೆಯುತ್ತಿದ್ದರು ಅದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕೆಲವರು ದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹಣ ಕೊಳ್ಳೆ ಹೊಡೆದು ವಿದೇಶದಲ್ಲಿ ಸುಖವಾಗಿದ್ದರೂ ಆ ಬಗ್ಗೆ ಪ್ರಧಾನಿ ಚಕಾರವೆತ್ತುತ್ತಿಲ್ಲ. ಇದಕ್ಕೆ ಬದಲಾಗಿ ಅಧಿಕಾರದಲ್ಲಿ ಮುಂದುವರಿಯುವುದು ಹೇಗೆ ಎಂಬುವುದುರ ಬಗ್ಗೆ ಅವರು ಹೆಚ್ಚು ಚಿಂತನೆ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1 ರೂಪಾಯಿ, 2 ರೂಪಾಯಿ ಏರಿಕೆ ಮಾಡಿದರೂ ಎಲ್ಲರು ಬಯ್ಯುತ್ತಿದ್ದರು. ಆದರೆ ಮೋದಿ ಸರ್ಕಾರ ನಾಲ್ಕುವರೆ ವರ್ಷಗಳ ಅವಧಿಯಲ್ಲಿ 13 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 214 ಪರ್ಸೆಂಟ್ ಹೆಚ್ಚಿಸುವುದರ ಮೂಲಕ ದೇಶದ ಜನರ ಮೇಲೆ ಹೆಚ್ಚಿನ ಹೊರೆ ಹೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ದೇಶದಲ್ಲಿ ಒಗ್ಗಟ್ಟು, ಸಾಮಾಜಿಕ ಸೌಹಾರ್ದತೆ ಇರುವುದು ಅವರಿಗೆ ಬೇಕಾಗಿಲ್ಲ. ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಇಲ್ಲ ಎಂದು ದೂರಿದರು.
 
70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಯವರು ಪದೇ ಪದೇ ಕೇಳುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಪಾಲು ಎಲ್ಲರಿಗಿಂತ ಹೆಚ್ಚಿದೆ ಎಂಬುವುದನ್ನು ಅವರು ಮರೆತಿದ್ದಾರೆ ಎಂದು ಕಿಡಿ ಕಾರಿದರು. ಕಲಬುರಗಿಯಲ್ಲಿ ವಿಮಾನ ನಿಲ್ದಾಣ, ಕೇಂದ್ರೀಯ ವಿಶ್ವವಿದ್ಯಾಲಯ, ಇ.ಎಸ್.ಐ ಆಸ್ಪತ್ರೆ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಆರಂಭಿಸಿದ್ದು ಯಾರು ? ಇದನ್ನೆಲ್ಲಾ ಮೋದಿ, ಅಮಿತ್ ಷಾ ಮಾಡಿದರೆ ಎಂದು ಖರ್ಗೆ ಪ್ರಶ್ನಿಸಿದರು.
 
ದೇಶದ ಸ್ವಾತಂತ್ರಕ್ಕಾಗಿ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು ಸೇರಿದಂತೆ ಅನೇಕ ಮಹನಿಯರು ಹೋರಾಟ ಮಾಡಿದ್ದಾರೆ. ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಒಬ್ಬರೇ ಒಬ್ಬ ಆರ್.ಎಸ್.ಎಸ್.ನವರು ಜೈಲಿಗೆ ಹೋಗಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಟೀಕಿಸಿದರು.
 
ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದೇ ಇದ್ದಲ್ಲಿ ಇಂದು ಮೋದಿ ಪ್ರಧಾನಿಯಾಗುತ್ತಿದ್ದರೆ ಎಂದು ವ್ಯಂಗವಾಡಿದರು.
 
ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ, ಮಾಜಿ ಎಂ.ಎಲ್.ಸಿ. ಅಲ್ಲಮಪ್ರಭು ಪಾಟೀಲ, ಶಾಸಕಿ ಖನಿಜಾ ಫಾತಿಮಾ, ಮುಖಂಡರಾದ ಇಲಿಯಾಸ್ ಭಾಗವಾನ್, ನೀಲಕಂಠ ಮೂಲಗೆ ಇತರರಿದ್ದರು.

Leave a Reply

Your email address will not be published.