ಮೊಟ್ಟೆ ಖರೀದಿಯಲ್ಲಿ ಗೋಲ್ ಮಾಲ್ : 3 ಕೋಟಿ ಮೊತ್ತದ ಟೆಂಡರ್ ರದ್ದುಗೊಳಿಸಿದ ಡಿಸಿ


ಕೊಪ್ಪಳ : ಅಂಗನವಾಡಿ ಕೇಂದ್ರಗಳಲ್ಲಿರುವ ಅತಿ ಕಡಿಮೆ ತೂಕವುಳ್ಳ ತೀವ್ರತರ ಅಪೌಷ್ಠಿಕ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ, ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಣೆ ಸೇರಿದಂತೆ ಇತರೆ ಯೋಜನೆ ಜಾರಿಯಲ್ಲಿದ್ದು, ಇದರ ಅನುಷ್ಠಾನದಲ್ಲಿ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶವನ್ನೇ ಉಲ್ಲಂಘಿಸಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರ ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದಕ್ಕಾಗಿ ಮಾರ್ಗಸೂಚಿಗಳೊಂದಿಗೆ ಆದೇಶವನ್ನು ಹೊರಡಿಸಿದ್ದರು ಸಹ ಕೊಪ್ಪಳ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಟೆಂಡರ್‌ ದಾರರೊಂದಿಗೆ ಶಾಮೀಲಾಗಿ ಸರ್ಕಾರದ ಆದೇಶಗಳನ್ನೇ ಉಲ್ಲಂಘಿಸಿ ಕೋಳಿಮೊಟ್ಟೆಗಳನ್ನು ಖರೀದಿಸಲು ಟೆಂಡರ್ ಕರೆದಿರುವುದು ಕಂಡುಬಂದಿದೆ.

ಅಂಗನವಾಡಿ ಕಾರ್ಯಕರ್ತಯರು ಖರೀದಿಸಬೇಕು:

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಅತಿ ಕಡಿಮೆ ತೂಕವುಳ್ಳ ತೀವ್ರತರ ಅಪೌಆಷ್ಠಿಕ ಮಕ್ಕಳಿಗೆ ಕೋಳಿ ಮೊಟ್ಟೆಯನ್ನು ಸ್ಥಳೀಯವಾಗಿ ಅಂಗನಾವಡಿ ಕಾರ್ಯಕರ್ತೆಯರು ಖರೀದಿಸಿ ವಿತರಿಸಲು ಸರ್ಕಾರದಿಂದ ದಿನಾಂಕ: 17.03.2012 ರಂದು ಆದೇಶವಾಗಿರುತ್ತದೆ. ಮೊಟ್ಟೆ ಖರೀದಿಯ ವೆಚ್ಚವನ್ನು ಅಂಗನವಾಡಿ ಕಾರ್ಯಕರ್ತೆಯವರ ಖಾತೆಗೆ ನೇರವಾಗಿ ಜಮಾ ಮಾಡಲು ಸ್ಪಷ್ಟವಾದ ಆದೇಶ ಇರುತ್ತದೆ.

ಅಲ್ಲದೇ ಅಂಗನವಾಡಿ ಕಾರ್ಯರ್ತೆಯರು ಖರೀದಿಸಿದ ಮೊಟ್ಟೆಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸರಿಯಾಗಿ ಹಣವನ್ನು ಪಾವತಿಸಬೇಕು, ಹಾಗೂ ಅಂಗನವಾಡಿ ಕೇಂದ್ರಗಳಲ್ಲಿರುವ ಅತಿ ಕಡಿಮೆ ತೂಕವುಳ್ಳ ಮಕ್ಕಳ ಸಂಖ್ಯೆಯನ್ನು ಲೆಕ್ಕಹಾಕಿ ಅವರ ಬ್ಯಾಂಕ್ ಖಾತೆಗಳಿಗೆ ಒಂದು ತಿಂಗಳು ಮುಂಗಡವಾಗಿ ಮೊಟ್ಟೆಗಳಿಗೆ ತಗಲುವ ಮೊತ್ತವನ್ನು ಜಮಾ ಮಾಡಬೇಕೆಂದು ಇಲಾಖೆಯ ನಿರ್ದೇಕರು ಜಿಲ್ಲೆಯ ಎಲ್ಲಾ ಉಪನಿರ್ದೇಶಕರುಗಳಿಗೆ ಸೂಕ್ತ ಸೂಚನೆಯನ್ನು ನೀಡಿರುತ್ತಾರೆ.

ಆದರೆ ಸರ್ಕಾರದ ಆದೇಶ ಹಾಗೂ ಸುತ್ತೋಲೆ, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಯ ಉನಿರ್ದೇಶಕರು 04 ತಾಲೂಕುಗಳ 05 ಶಿಸು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳ ಅಪೌಷ್ಠಿಕ ಮಕ್ಕಳಿಗೆ ಹಾಗೂ ಇತ್ತೀಚಿಗೆ ಜಾರಿಯಾಗಿರುವ ಮಾತೃಪೂರ್ಣ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಕೋಳಿ ಮೊಟ್ಟೆ ಸರಬರಾಜಿಗಾಗಿ 12 ಜುಲೈ 2018 ರಂದು ಟೆಂಡರ್ ಕರೆದಿದ್ದಾರೆ.

ಇಲ್ಲಿಯ ಅಧಿಕಾರಿಗಳು ಅಂಗನವಾಡಿ ಮಕ್ಕಳು ತಿನ್ನುವ ಅನ್ನಕ್ಕೂ ಕೈಹಾಕಿದ್ದು, ಸರ್ಕಾರದ ಆದೇಶವನ್ನು ಪಾಲಿಸಬೇಕಾದವರು ಮೊಟ್ಟೆ ಖರೀದಿಗೆ ಕೈ ಹಾಕಿದ್ದು, ಟೆಂಡರ್‌ದಾರರಿಗೆ ಅನುಕೂಲವಾಗಲು ಹಾಗೂ 3 ಕೋಟಿ ಟೆಂಡರ್ ನಲ್ಲಿ ಭ್ರಷ್ಟಾಚಾರ ಎಸಗಲು ಮುಂದಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಇಲಾಖೆಯಲ್ಲಿನ ಅಧಿಕಾರಿಗಳು ಕೆಲ ಸರಬರಾಜು ಟೆಂಡರ್‌ದಾರರೊಂದಿಗೆ ಕೂಡಿಕೊಂಡು ಇಲಾಖೆಯಲ್ಲಿಯ ಇತರೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವುಗಳ ಬಗ್ಗೆ ಇಲಾಖಾ ಹಂತದಲ್ಲಿ ತನಿಖೆಯಲ್ಲಿ ಇವೆ ಎನ್ನಲಾಗಿದೆ.

ಟೆಂಡರ್ ರದ್ದುಗೊಳಿಸಲು ಸರ್ಕಾರದ ಆದೇಶ:

ಅಂಗನವಾಡಿ ಕೇಂದ್ರಗಳಿಗೆ ಅವಶ್ಯವಿರುವ ಕೋಳಿ ಮೊಟ್ಟೆಗಳನ್ನು ಟೆಂಡರ್ ಮೂಲಕ ಖರೀದಿಸಲು ಪ್ರಧಾನ ಕಛೇರಿಯಿಂದ ಯಾವುದೇ ಸುಚನೆಗಳನ್ನು ನೀಡಿರುವದಿಲ್ಲ ಆದರೂ ಸಹ ಮೊಟ್ಟೆಗಳ ಸರಬರಾಜು ಮಾಡಲು ಟೆಂಡರ್ ಕರೆದಿರುವುದಕ್ಕೆ ಇಲಾಖೆ ನಿರ್ದೇಶಕರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಯಾವುದೇ ಟೆಂಡರ್‌ಗಳನ್ನು ಕರೆಯದಂತೆ ಸೂಚಿಸಿದ್ದು, ಈಗಾಗಲೇ ಟೆಂಡರ್ ಕರೆದಿದ್ದರೆ ತಕ್ಷಣ ರದ್ದುಪಡಿಸುವುಂತೆ 28 ಆ. 2018 ರ ಪತ್ರದಲ್ಲಿ ಸೂಚಿಸಿಲಾಗಿದೆ.  ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯಾದೇಶ ನೀಡುವ ಹಂತದಲ್ಲಿದ್ದರೆ ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡುವವರೆಗೂ ಯಾವುದೇ ಪ್ರಕ್ರಿಯೇ ಮುಂದುವರೆಸದಂತೆ ತಿಳಿಸಲಾಗಿದೆ.

ಟೆಂಡರ್ ರದ್ದುಗೊಳಿಸಿದ ಜಿಲ್ಲಾಧಿಕಾರಿಗಳು:

ಇಲಾಖೆಯ ನಿರ್ದೇಶಕರ ಆದೇಶದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರು 2018-19ನೇ ಸಾಲಿಗೆ ಕೋಳಿ ಮೊಟ್ಟೆ ಖರೀದಿಗಾಗಿ ಕರೆಯಲಾಗಿದ್ದ ಇ-ಟೆಂಡರ್ ನ್ನು ರದ್ದುಗೊಳಿಸಿ 5 ಸೆ. 2018 ರಂದು ಆದೇಶವನ್ನು ಹೊರಡಿಸಿದ್ದು, ಇಲಾಖೆಯ ನಿಯಾಮಾನುಸಾರ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ಕೊಪ್ಪಳ, ಗಂಗಾವತಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ ತಾಲೂಕುಗಳ 5ಶಿಸು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ 1850 ಅಂಗನವಾಡಿ ಮತ್ತು ಮಿನಿ ಅಂಗನವಾಡಿ ಕೇಂದ್ರಗಳು, 1599 ತೀವ್ರ ಅಪೌಷ್ಠಿಕತೆ 41877 ಸಾದರಣ ಅಪೌಷ್ಠಿಕ ಮಕ್ಕಳು, 16791 ಗಭಿರ್ಣಿಯರು, 16395 ಬಾಣಂತಿಯರು, ಹಾಗೂ 76662 ಅಪೌಷ್ಠಿಕ ಮಕ್ಕಳು ಸೇರಿದಂತೆ ಒಟ್ಟು 115402 ಫಲಾನುಭವಿಗಳ ಸಂಖ್ಯೆಗೆ ಕೋಳಿ ಮೊಟ್ಟೆಯನ್ನು ಸರ್ಕಾರದ ಆದೇಶದ ನಿಯಾಮನುಸಾರ ವಿತರಣೆ ಮಾಡಬೇಕು.

ಕೋಳಿ ಮೊಟ್ಟೆ ವಿತರಣೆಗೆ ಟೆಂಡರ್ ಕರೆಯುವ ನಿಯಮ ಇಲ್ಲ ಆದರೂ ಇಲ್ಲಿ ಕರೆಯಲಾಗಿದೆ, ಈಗ ಇಲಾಖೆಯ ನಿಯಾಮನುಸಾರ ಜಿಲ್ಲಾಧಿಕಾರಿಗಳು ಟೆಂಡರ್ ನ್ನು ರದ್ದುಗೊಳಿಸಿದ್ದು, ನೇರವಾಗಿ ಅಂಗನವಾಡಿ ಕಾರ್ಯಕರ್ತೆಯರ ಬ್ಯಾಂಕ್ ಖಾತೆ ಹಣವನ್ನು ಜಮಾ ಮಾಡಲು ಕ್ರಮಕೈಗೊಳ್ಳಲಾಗಿದೆ- ಈರಣ್ಣ ಪಂಚಾಲ, ಉಪನಿರ್ದೇಶಕರು, ಮ & ಮ ಅಭಿವೃದ್ಧಿ ಇಲಾಖೆ

– ಮೌಲಾಹುಸೇನ ಬುಲ್ಡಿಯಾರ್

Leave a Reply

Your email address will not be published.