ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಜೆಡಿಎಸ್ ಮುಖಂಡರು


ಪಾಂಡವಪುರ : ಪುರಸಭೆಗೆ ನಡೆದ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ಪುರಸಭೆ ವ್ಯಾಪ್ತಿಯ ಮತದಾರರು ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಇ.ಧರ್ಮರಾಜು ನೇತೃತ್ವದಲ್ಲಿ ನೂತನ ಸದಸ್ಯರು ಹಾಗೂ ಇತರೆ ಮುಖಂಡರು ಕೃತಜ್ಞತೆ ಸಲ್ಲಿಸಿದರು.

ಪಟ್ಟಣದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಇ.ಧರ್ಮರಾಜು ಮಾತನಾಡಿ, ಪಾಂಡವಪುರ ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆ ವ್ಯಾಪ್ತಿಯ ಮತದಾರರು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವುದರ ಮೂಲಕ ಅಭಿವೃದ್ಧಿಯ ಪರ ನಿಂತಿದ್ದಾರೆ. ಜತೆಗೆ ಸಚಿವ ಸಿ.ಎಸ್.ಪುಟ್ಟರಾಜು ಅವರ ಕೈ ಬಲಪಡಿಸಿದ್ದಾರೆ. ಪುರಸಭೆ ವ್ಯಾಪ್ತಿಯ ಎಲ್ಲ ಮತದಾರರಿಗೆ ಮತ್ತು ಪಕ್ಷದ ಅಭೂತ ಪೂರ್ವ ಗೆಲುವಿಗೆ ಶ್ರಮಿಸಿದ ಎಲ್ಲ ಜೆಡಿಎಸ್ ಕಾರ್ಯಕರ್ತರಿಗೆ ಪಕ್ಷದ ಪರವಾಗಿ ಅಭಿನಂದಿಸುವುದಾಗಿ ಅವರು ಹೇಳಿದರು.

ಜೆಡಿಎಸ್ ಮುಖಂಡ ಹಿರೀಮರಳಿ ರಾಮಕೃಷ್ಣ ಮಾತನಾಡಿ, ಪಾಂಡವಪುರ ಪುರಸಭೆಯನ್ನು ಮಾದರಿ ಪಟ್ಟಣವನ್ನಾಗಿ ಮಾಡುವುದು ಸಚಿವ ಸಿ.ಎಸ್.ಪುಟ್ಟರಾಜು ಅವರ ಕನಸಾಗಿತ್ತು. ಮತದಾರರು ಪುಟ್ಟರಾಜು ಅವರ ಮೇಲೆ ನಂಬಿಕೆ ಇಟ್ಟು ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಅಭಿವೃದ್ಧಿಗಾಗಿ ಮತ ನೀಡಿದ್ದಾರೆ, ಇದರಿಂದ ಮತದಾರರು ಅಭಿನಂದನಾರ್ಹರು ಎಂದರು.

ರೈತಸಂಘ, ಕಾಂಗ್ರೆಸ್ ಬೇಳೆ ಬೇಯಲಿಲ್ಲ : ಶತಾಯ ಗತಾಯ ಪುರಸಭೆಯಲ್ಲಿ ಜೆಡಿಎಸ್ ಮಣಿಸಲು ಕಾಂಗ್ರೆಸ್ ಮತ್ತು ರೈತಸಂಘ ಒಟ್ಟಾಗಿ ಶ್ರಮಿಸಿದ್ದರೂ ಜೆಡಿಎಸ್ ಮಣಿಸಲು ಸಾಧ್ಯವಾಗಿಲ್ಲ. ಪುರಸಭೆ ವ್ಯಾಪ್ತಿಯ ಮತದಾರರು ರೈತಸಂಘ ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ, ಇನ್ನು ಮುಂದಾದರೂ ರೈತಸಂಘದವರು ಜೆಡಿಎಸ್ ಮುಖಂಡರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಿ ಎಂದು ಜೆಡಿಎಸ್ ಹಿರಿಯ ಮುಖಂಡ ವೈರಮುಡಿಗೌಡ ಗುಡುಗಿದರು.

5ನೇ ಬಾರಿ ಜಯಗಳಿಸಿದ ಎಂ.ಗಿರೀಶ್ : ಪಾಂಡವಪುರ ಪುರಸಭೆಗೆ ಸತತ 5ನೇ ಬಾರಿಗೆ ಜಯಗಳಿಸಿದ ಪುರಸಭೆಯ ಹಿರಿಯ ಸದಸ್ಯ ಎಂ.ಗಿರೀಶ್ ಮಾತನಾಡಿ, ಪಾಂಡವಪುರ ಪಟ್ಟಣವನ್ನು ಸಣ್ಣ ವಾಣಿಜ್ಯ ನಗರವನ್ನಾಗಿ ನಿರ್ಮಿಸುವುದು ಸಿ.ಎಸ್.ಪುಟ್ಟರಾಜು ಅವರ ಕನಸಾಗಿದೆ. ಇಲ್ಲಿನ ಮತದಾರರು ಪುಟ್ಟರಾಜು ಅವರ ಬೆಂಬಲಕ್ಕೆ ನಿಂತು ಪುರಸಭೆಗೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ, ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಯುಜಿಡಿ ಕಾಮಗಾರಿ ಸೇರಿದಂತೆ ರಸ್ತೆ ಮತ್ತು ಇತರೆ ಕಾಮಗಾರಿಗಳನ್ನು ಆದ್ಯತಾನುಸಾರ ನಡೆಸಲಾಗುವುದು ಜತೆಗೆ ಸಚಿವ ಪುಟ್ಟರಾಜು ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದರು.

ಅಧ್ಯಕ್ಷ ಸ್ಥಾನಕ್ಕೆ ಗೊಂದಲವಿಲ್ಲ : ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಪಾಂಡವಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನೂತನ ಸದಸ್ಯರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ ಗಿರೀಶ್ ಪುಟ್ಟರಾಜು ಸೂಚಿಸಿದ ಅಭ್ಯರ್ಥಿಯೇ ನೂತನ ಅಧ್ಯಕ್ಷರಾಗುತ್ತಾರೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ರಾಜಪ್ಪ ನೂತನ ಸದಸ್ಯರಾದ ಶಿವಣ್ಣ, ಸಿ.ಚಿಕ್ಕತಮ್ಮೇಗೌಡ, ಇಮ್ರಾನ್ ಷರೀಫ್, ಆರ್.ಸೋಮಶೇಖರ್, ಚಂದ್ರು, ಬಿ.ವೈ.ಬಾಬು, ಶಿವಕುಮಾರ್, ಮಹದೇವು ಮುಂತಾದವರು ಇದ್ದರು.

Leave a Reply

Your email address will not be published.