ಡಾ.ಪರ್ವೀನ್ ಸಲೀಂ ಗೆ ರಾಜ್ಯ ಉತ್ತಮ ಶಿಕ್ಷಕಿ ವಿಶೇಷ ಪ್ರಶಸ್ತಿ


ಪಾಂಡವಪುರ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ನೀಡಲಾಗುವ ೨೦೧೮ ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ವಿಶೇಷ ಪ್ರಶಸ್ತಿಗೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶವಾದ ಸಣಬ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಸಹ ಶಿಕ್ಷಕಿ ಡಾ.ಪರ್ವೀನ್ ಸಲೀಂ ಅವರನ್ನು ಆಯ್ಕೆ ಮಾಡಲಾಗಿದೆ.

ಸೆ. 5 ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಡಾ.ಸಿ.ಪಿ.ಕೆ ಅವರ ವಿಮರ್ಶೆ ಮತ್ತು ವಿಚಾರ ವಿಷಯದಲ್ಲಿ ಮೈಸೂರು ವಿವಿಯಿಂದ ೨೦೦೬ ರಲ್ಲಿ ಪಿಹೆಚ್ ಡಿ ಪದವಿ ಪಡೆದಿರುವ ಇವರು ಎಂ.ಎ ಬಿಇಡಿ ಪದವಿ ಪಡೆದಿದ್ದು ಸಣಬ ಬಡಾವಣೆ ಶಾಲೆಯಲ್ಲಿ ಕಳೆದ ೧೧ ವರ್ಷಗಳಿಂದ ಕನ್ನಡ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕವಿ ಅನಾರ್ಕಲಿ ಸಲೀಂ ಚಿಣ್ಯ ಅವರ ಪತ್ನಿಯಾಗಿರುವ ಇವರು ಕವಯಿತ್ರಿಯಾಗಿದ್ದು ಸಾಹಿತ್ಯ ಕ್ಷೇತ್ರದ ಕಥಾರಂಗಂ ಪ್ರಶಸ್ತಿ, ಅಕ್ಷಯ ಕಾವ್ಯ ಪ್ರಶಸ್ತಿ, ಚೈತನ್ಯ ರತ್ನ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ.

ಸಂಪನ್ಮೂಲ ವ್ಯಕ್ತಿಯಾಗಿಯೂ ಕೆಲಸ ನಿರ್ವಹಿಸಿರುವ ಇವರಿಗೆ ೨೦೧೩ ರಲ್ಲಿ ಡಾ.ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ” ರಾಜ್ಯ ಮಟ್ಟದ ಡಾ.ನಲ್ಲೂರು ಪ್ರಸಾದ್ ಆದರ್ಶ ಶಿಕ್ಷಕಿ ಪ್ರಶಸ್ತಿ , ಡಾ.ಸ.ಜ.ನಾಗಲೋಠಿ ಮಠ ಉತ್ತಮ ವಿಜ್ಞಾನ ಮಾರ್ಗದರ್ಶಕಿ ಪ್ರಶಸ್ತಿ ಮತ್ತು ೨೦೧೭ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಗೌರವ ದೊರೆತಿದೆ.

ಕನ್ನಡ ಭಾಷಾ ಬೋಧನೆ, ಪರಿಸರ ಉಳಿವು, ವೈಜ್ಞಾನಿಕ ಸಂಶೋಧನಾ ಮಾರ್ಗದರ್ಶನ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರಾಗಿ ತೊಡಗಿಸುವಲ್ಲಿ ಡಾ.ಪರ್ವೀನ್ ಸಲೀಂ ಕಾಳಜಿ ವಹಿಸಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ಸಣಬ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದಾರೆ.

Leave a Reply

Your email address will not be published.