ಒಂದು ಹೆಣ್ಣಿನ ಬಾಯಿ ಮುಚ್ಚಿಸಲು ವೀರರು, ಶೂರರು ಒಂದಾಗಿದ್ದಾರೆ: ನಟ ಪ್ರಕಾಶ ರೈ


ಬೆಂಗಳೂರು: ಒಂದು ಹೆಣ್ಣಿನ ಬಾಯಿ ಮುಚ್ಚಿಸಲು ವೀರರು, ಶೂರರು, ಪರಾಕ್ರಮಿಗಳ ಒಟ್ಟಾಗಿದ್ದಾರೆ.  #metoo ಅಭಿಯಾನ ದಾರಿ ತಪ್ಪುತ್ತಿದೆ ಅಂತಾ ಬಹುಭಾಷಾ ನಟ ಪ್ರಕಾಶ ರೈ ಕಳವಳ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟರ್ ನಲ್ಲಿ ಸುಮಾರು ನಾಲ್ಕು ಪುಟಗಳ ಪತ್ರ ಬರೆದ ಅವರು,  ಮಾನವೀಯ ಸೂಕ್ಷಮತೆಯನ್ನು ಮರೆತು….ಅಸಭ್ಯ…ಅಸಹ್ಯತೆಯ .. ಹೇಳಿಕೆಗಳಿಂದ…   ಅಭಿಯಾನವನ್ನು ದಾರಿ ತಪ್ಪಿಸುತ್ತಿರುವವರೆ… ದಯವಿಟ್ಟು ಕಿವಿಗೊಟ್ಟು ಕೇಳಲು ಕಲಿಯಿರಿ..। please learn to listen first ..   ಸಲಹೆ ನೀಡಿದ್ದಾರೆ.

ಪ್ರಕಾಶ ರೈ ಬರೆದ ಸಾಲುಗಳು ಯಥಾವತ್ತಾಗಿ…

ಶ್ರುತಿ ಹರಿಹರನ್​​ ಪ್ರಸಂಗ ಎಬ್ಬಿಸಿರುವ ಅಲೆಗಳನ್ನ ನೋಡಿದರೆ ಗಾಬರಿಯಾಗುತ್ತದೆ. ಒಂದು ಹೆಣ್ಣಿನ ಬಾಯಿ ಮುಚ್ಚಿಸಲು ಅದೆಷ್ಟು ಶೂರರು, ವೀರರು, ಪರಾಕ್ರಮಿಗಳು ಒಟ್ಟಾಗಿದ್ದಾರೆ. ಎಷ್ಟೊಂದು ಕತೆಗಳನ್ನ ಹೆಣೆಯುತ್ತಿದ್ದಾರೆ. ಎಷ್ಟೊಂದು ಲೆಕ್ಕಾಚಾರಗಳನ್ನ ಹಾಕುತ್ತಿದ್ದಾರೆ. ಇದನ್ನ ಎಡಪಂಥಿಯರ ಪಿತೂರಿ ಅಂತ ಯಾರೋ ಕರೆದರಂತೆ. ಎಲ್ಲವನ್ನೂ ತಂದು ರಾಜಕೀಯದ ಕೊಂಬಿಗೆ ಕಟ್ಟಿ ಪಾರಾಗುವುದು ಈ ಕಾಲದ ಜಾಯಮಾನ.

ಅದು ರಾಜಕೀಯ ಕಂಣ್ರೀ ಅಂದುಬಿಟ್ಟರೆ ಅಲ್ಲಿಗೆ ಮುಗಿದುಹೋಯಿತು. ಹೆಣ್ಣಿನ ಮೇಲೆ ನಡೆದ ದೌರ್ಜನ್ಯದಿಂದ ಬೇಕಿದ್ದರೂ ಪಾರಾಗಬಹುದು. ರಾಜಕೀಯ ಅಂದುಬಿಟ್ಟರೆ ಲೈಂಗಿಕ ದೌರ್ಜನ್ಯ ಕೂಡ ತಪ್ಪೇನಲ್ಲ ಇವರ ಪಾಲಿಗೆ.

ಅರ್ಜುನ್ ಸರ್ಜಾರನ್ನು ಸಮರ್ಥಿಸಿಕೊಳ್ಳಲು ಇವರೆಲ್ಲ ಎದ್ದು ಕೂತಿದ್ದಾರೆ ಅಂತ ನನಗೆ ಅನ್ನಿಸಿಲ್ಲ. ಅವರ ಉದ್ದೇಶ ಹೆಣ್ಣು ಮಾತಾಡುವುದನ್ನು ಹೇಗಾದರೂ ಮಾಡಿ ತಡೆಯಬೇಕು ಅನ್ನುವುದು. ಯಾಕೆಂದರೆ ಸಿನಿಮಾ ಕ್ಷೇತ್ರದಲ್ಲಿರುವ ಮಹಿಳೆ ಮಾತಾಡಲು ಆರಂಭಿಸಿದರೆ ಯಾರ್ಯಾರ ಬಂಡವಾಳ ಹೊರಬೀಳುತ್ತದೋ ಹೇಳುವವರು ಯಾರು? ತನಗೆ ಸಂಬಂಧವೇ ಇಲ್ಲದೆ ಹೋದರೂ ನಿರ್ಮಾಪಕರ ಸಂಘ ಕಹಳೆ ಊದಿತು. ತನಗೆ ಸಂಬಂಧ ಇದ್ದರೂ ಕಲಾವಿದರ ಸಂಘ ಸುಮ್ಮನೆ ಕೂತುಬಿಟ್ಟಿತು.

ವಾಣಿಜ್ಯ ಮಂಡಳಿಯೇ ದೇವಾಲಯ, ವಾಣಿಜ್ಯ ಮಂಡಳಿಯೇ ನ್ಯಾಯಾಲಯ ಅಂತ ಮತ್ತೊಬ್ಬರು ಇಡೀ ಪ್ರಸಂಗವನ್ನ ವಾಣಿಜ್ಯ ಮಂಡಳಿಯಲ್ಲೇ ತೀರ್ಮಾನಿಸಲು ಇಚ್ಛಿಸಿದರು. ಕೌರವರು ಮತ್ತು ಅವರಿಗೆ ತಮ್ಮನ್ನು ಮಾರಿಕೊಂಡ ಪಾಂಡವರ ನಡುವೆ ನ್ಯಾಯ ಕೇಳಲು ನಿಂತ ದ್ರೌಪದಿಯ ಕತೆಗೂ, ಇಲ್ಲಿ ನಡೆಯುತ್ತಿರುವುದಕ್ಕೂ ಯಾವುದೇ ವ್ಯತ್ಯಾಸವೇ ಇಲ್ಲವಲ್ಲ.

 

 

Leave a Reply

Your email address will not be published.