ಬಳ್ಳಾರಿ ಉಪಚುನಾವಣೆ: ಸಚಿವ ಡಿಕೆಶಿ ನೇತೃತ್ವದಲ್ಲಿ ಗುಪ್ತ ಸಭೆ


ಹೊಸಪೇಟೆ: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳ ಕುರಿತು ಗುಪ್ತ ಸಭೆ ನಡೆಸಲಾಗಿದೆ.

ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಸ್ಥಳೀಯ ಹೋಟೆಲ್ ಮಲ್ಲಿಗಿ ಸಭಾಂಗಣದಲ್ಲಿ ಭಾನುವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು.  ಆದರೆ ಸಭಾಂಗಣಕ್ಕೆ ಆಗಮಿಸಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸದ ಸಚಿವ ಡಿ.ಕೆ.ಶಿವಕುಮಾರ್, ಉಪಚುನಾವಣೆ ಸಂದರ್ಭದಲ್ಲಿ ಅನುಸರಿಸಬೇಕಾದ ತಂತ್ರಗಳ ಕುರಿತು ತಾವು ಉಳಿದು ಕೊಂಡಿದ್ದ ರೂಂ ನಲ್ಲಿಯೇ ಸಚಿವರು, ಶಾಸಕರೊಂದಿಗೆ ಗುಪ್ತ ಸಭೆ ನಡೆಸಿ, ಚರ್ಚಿಸಿದರು.

ಗುಪ್ತ ಸಭೆಗೆ ಆಗಮಿಸದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ದೂರ ಇರಿಸಲಾಗಿತ್ತು. ಅಲ್ಲದೇ ಕೆಲ ಪ್ರಮುಖ ಮುಖಂಡರನ್ನು ರೂಂ ಗೆ ಕರೆಯಿಸಿಕೊಂಡು ಚರ್ಚಿಸಿ, ಅನುಸರಿಬೇಕಾದ ತಂತ್ರಗಳ ಕುರಿತು ತಿಳಿಸಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಲ್ಲಿಗಿ ಸಭಾಂಗಣದಲ್ಲಿ ಕಾಯುತ್ತಾ ಕುಳಿತಿದ್ದರೂ, ಸಚಿವ ಡಿಕೆಶಿ ಅಲ್ಲಿಗೆ ಬಂದು ಚರ್ಚೆ ನಡೆಸದೆ ತರಾತುರಿಯಲ್ಲಿ ಹೊರಟು ಹೋದರು.

ಸಚಿವ ರಮೇಶ ಜಾರಕಿಹೊಳಿ ದೂರ:

ಸಭೆಗೆ ಆಗಮಿಸಬೇಕಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಬಳ್ಳಾರಿ ಜಿಲ್ಲೆಗೆ ಆಗಮಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರೂ, ಹೊಸಪೇಟೆಯ ಸಭೆಗೆ ಆಗಮಿಸದೆ, ಸಭೆಯಿಂದ ದೂರ ಉಳಿಯುವ ಮೂಲಕ ತಮ್ಮ ಹಾಗೂ ಡಿಕೆಶಿ ನಡುವೆ ಇನ್ನು ಮುನಿಸು ಇದೆ ಎಂಬುದನ್ನು ಸಾಬೀತುಪಡಿಸಿದರು.

ಗುಪ್ತ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಯು.ಟಿ.ಖಾದರ್, ಶಾಸಕರಾದ ಆನಂದ್ ಸಿಂಗ್, ತುಕಾರಾಂ, ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ ಸೇರಿದಂತೆ ಕೆಲ ಪ್ರಮುಖ ಮುಖಂಡರು ಮಾತ್ರ ಭಾಗವಹಿಸಿದ್ದರು.

Leave a Reply

Your email address will not be published.