ದುನಿಯಾ ವಿಜಿಗೆ ಅಂತೂ ಜಾಮೀನು ಸಿಕ್ತು !


ಬೆಂಗಳೂರು: ಜಿಮ್ ತರಬೇತುದಾರ ಮಾರುತಿಗೌಡ ಅಪಹರಣ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾಗಿದ್ದ ನಟ ದುನಿಯಾ ವಿಜಯ ಗೆ ಇಂದು ಷರತ್ತು ಬದ್ಧ ಜಾಮೀನು ಮಂಜೂರಾಗಿದ್ದು, ಬಿಗ ರಿಲೀಫ್ ಸಿಕ್ಕಿದೆ.

ವಿಜಿ ಜಾಮೀನು ಅರ್ಜಿಯನ್ನು ಶನಿವಾರ  ಕೈಗೆತ್ತಿಕೊಂಡಿದ್ದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ, ಹೀರೋ ಬೇರೆಯವರಿಗೆ ರೊಲ್ ಮಾಡೆಲ್ ಆಗಿರಬೇಕು. ದುನಿಯಾ ವಿಜಯ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ಅವರ ಪರ ವಕೀಲರಿಗೆ ಕಿವಿಮಾತು ಹೇಳಿದರು.

ಒಂದು ಲಕ್ಷ ರೂ. ಬಾಂಡ್ , ಇಬ್ಬರ ಶ್ಯುರಿಟಿ ನೀಡುವುದರ ಜತೆಗೆ ಸಾಕ್ಷಿ ನಾಶ ಮಾಡಬಾರದು. ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಸೆಲೆಬ್ರೆಟಿಗಳಾದವರು ಹೇಗೆಂದರೆ ಹಾಗೆ ವರ್ತಿಸಬಾರದು. ಮಾಧ್ಯಮಗಳಿವೆ, ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಈಗ ಜಾಮೀನು ನೀಡಿದ್ದೇನೆ . ಮುಂದೆ ಹೀಗಾಗದಂತೆ ವರ್ತಿಸಬೇಕು ಎಂದು ಜಡ್ಜ್ ಮೌಖಿಕ ಎಚ್ಚರಿಕೆ ನೀಡಿದರು.

ಕಳೆದ ಶನಿವಾರ (ಸೆ. 22) ರಾತ್ರಿ ನಟ ದುನಿಯಾ ವಿಜಯ ಮತ್ತವರ ಸಹಚರರು ಮಾರುತಿಗೌಡ ಮೇಲೆ ಹಲ್ಲೆ ನಡೆಸಿದ್ದರಿಂದ ಪೊಲೀಸರು ಅವರನ್ನು ಬಂಧಿಸಿದ್ದರು. ದೀರ್ಘಕಾಲದ ವಿಚಾರಣೆ ನಂತರ ರವಿವಾರ ಸಂಜೆ ನ್ಯಾಯಾಧೀಶರೆದುರು ಹಾಜರುಪಡಿಸಿದಾಗ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಸೋಮವಾರವೇ ಮ್ಯಾಜಿಸ್ಟ್ರೇಟ್  ನ್ಯಾಯಾಲಯಕ್ಕೆ ವಿಜಿ ಪರ ವಕೀರಲು ಜಾಮೀನು ಅರ್ಜಿ ಸಲ್ಲಿಸಿದ್ದರಾದರೂ ನ್ಯಾಯಾಲಯ ಜಾಮೀನು ಕೊಡಲು ನಿರಾಕರಿಸಿತ್ತು.

ಹೀಗಾಗಿ ವಿಜಯ ಪರ ವಕೀಲರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ಮೇಲೆ ಶನಿವಾರ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಧೀಶರು ಇಂದಿಗೆ ಆದೇಶ ಕಾದಿರಿಸಿದ್ದರು.

ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆ ಇಂದು ಸಂಜೆಯೇ ದುನಿಯಾ ವಿಜಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಏತನ್ಮಧ್ಯೆ ದುನಿಯಾ ವಿಜಿ ಅಭಿಮಾನಿಗಳು ಹೊಸಕೆರೆಹಳ್ಳಿಯಲ್ಲಿರುವ ಅವರ ಮನೆ ಮುಂದೆ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ನೆಚ್ಚಿನ ನಟನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Leave a Reply

Your email address will not be published.