ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯ : ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಭೇಟಿ


ಹಾವೇರಿ: ಮೊಬೈಲ್ ಆ್ಯಪ್ ಬಳಸಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕೈಗೊಂಡಿದ್ದು, ಹಾವೇರಿ ಹಾಗೂ ಬ್ಯಾಡಗಿ ತಾಲೂಕಿನ ಹಲವು ರೈತರ ತಾಕುಗಳಿಗೆ ಬುಧವಾರ ಭೇಟಿ ನೀಡಿ ಬೆಳೆ ಸಮೀಕ್ಷೆ ಕಾರ್ಯವನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಪರಿಶೀಲಿಸಿದರು.
ಮುಂಗಾರು ಬೆಳೆ ಸಮೀಕ್ಷೆಯ ಪ್ರಗತಿಯಲ್ಲಿ ಹಾವೇರಿ ಜಿಲ್ಲೆ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಮೊದಲಸ್ಥಾನ ಪಡೆಯುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸುವಂತೆ ಕಂದಾಯ ಹಾಗೂ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಬೆಳೆ ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ, ನಿಖರವಾಗಿ ರೈತರು ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಿ ದಾಖಲೆಗಳಲ್ಲಿ ನಿಖರವಾಗಿ ದಾಖಲಿಸಿಸುವುದು ಈ ಬೆಳೆ ಸಮೀಕ್ಷೆಯ ಉದ್ದೇಶವಾಗಿದೆ. ಮೊಬೈಲ್ ಆಪ್‍ನಿಂದ ಸಂಗ್ರಹಿಸಿರುವ ರೈತವಾರು ಪ್ಲಾಟ್‍ವಾರು ಬೆಳೆ ಮಾಹಿತಿಯನ್ನು ಹಲವು ರೈತ ಫಲಾನುಭವಿಗಳ ಯೋಜನೆಗಳಲ್ಲಿ ಬಳೆಸಲಾಗುವುದು. ಇದರಿಂದ ನೈಜ ರೈತರಿಗೆ ಅನುಕೂಲವಾಗಲಿದೆ. ಬೆಳೆ ಸಮೀಕ್ಷೆ ಕಾರ್ಯಕ್ಕೆ ತಮ್ಮ ತಾಕುಗಳಿಗೆ ಸಮೀಕ್ಷಾ ಸಿಬ್ಬಂದಿಗಳು ಆಗಮಿಸಿದ್ದಾಗ ಬೆಳೆ ಬೆಳೆದ ರೈತರು ಹಾಜರಾಗಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ರೈತರಿಗೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಮೀಕ್ಷೆಯಲ್ಲಿ ಗೊಂದಲ ಮತ್ತು ವಿಳಂಬಕ್ಕೆ ಅವಕಾಶವಿಲ್ಲದಂತೆ ಮೊಬೈಲ್ ಆ್ಯಪ್ ಮೂಲಕ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈಗೊಂಡಿರುವ ಸಮೀಕ್ಷೆ ಕಾರ್ಯದ ನಿಖರತೆ ಹಾಗೂ ಕ್ಷೇತ್ರ ಮಟ್ಟದಲ್ಲಿ ಚುರುಕುಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸಮೀಕ್ಷೆ ನಡೆಸುತ್ತಿರುವ ಹಾವೇರಿ ತಾಲೂಕಿನ ದೇವಗಿರಿ ಯಲ್ಲಾಪುರ, ಕನಕಾಪುರ, ಕುರುಬಗೊಂಡ ಹಾಗೂ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಇತರ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಕಾರ್ಯ ಚಟುವಟಿಕೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಉತ್ತಮ ಕಾರ್ಯನಿರ್ವಹಿಸುತ್ತಿದ್ದು ರಾಜ್ಯಕ್ಕೆ ಹಾವೇರಿ ಮೊದಲ ಸ್ಥಾನದಲ್ಲಿ ಬರುವಂತೆ ಶ್ರಮವಹಿಸಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿ, ಸಿಬ್ಬಂದಿಗಳಿಗೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ರೈತರ ಟೋಮೆಟೋ ಪ್ಲಾಟ್, ಹತ್ತಿ ಪ್ಲಾಟ್, ಮೆಕ್ಕೆಜೋಳ ಪ್ಲಾಟ್‍ಗಳಿಗೆ ಭೇಟಿ ನೀಡಿ ಬೆಳೆಯ ಸ್ಥಿತಿಗತಿಯನ್ನು ಸ್ವತಃ ಜಿಲ್ಲಾಧಿಕಾರಿಗಳು ಮೊಬೈಲ್‍ನಲ್ಲಿ ಕ್ಲಿಕ್ಕಿಸಿ ಆ್ಯಪ್‍ನಲ್ಲಿ ದಾಖಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶಿವಕುಮಾರ, ಉಪ ತಹಶೀಲ್ದಾರ ದ್ಯಾಮಣ್ಣನವರ ಹಾಗೂ ಕೃಷಿ ಮತ್ತು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

Leave a Reply

Your email address will not be published.