ಲಕ್ಷ್ಮಿ ಹೆಬ್ಬಾಳಕರ ಕೆಳಗಿಳಿಸಲು ಶುರುವಾಯ್ತು ಜಡೆಜಗಳ !


ಬೆಂಗಳೂರು: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮಹಿಳಾ ನಾಯಕಿಯರೇ ಕಸರತ್ತು ನಡೆಸಿರುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.

ಲಕ್ಷ್ಮಿ ಹೆಬ್ಬಾಳಕರ ಕೆಳಗಿಳಿಸಿ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಅವರ ಬೆಂಬಲಿಗರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಯಮಾವಳಿ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ ಇರಬೇಕು. ಹೆಬ್ಬಾಳಕರ ಈಗ ಶಾಸಕಿಯಾಗಿರುವುದರಿಂದ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಿ ಡಾ. ನಾಗಲಕ್ಷ್ಮಿ ಅವರಿಗೆ ಅವಕಾಶ ಕೊಡಬೇಕು ಎಂದು ಮಹಿಳಾ ನಾಯಕಿಯರು ಒತ್ತಡ ಹೇರಿದ್ದಾರೆ.

ಈ ನಡುವೆ ಮಹಿಳಾ ಘಟಕದ ಅಧ್ಯಕ್ಷ ಹುದ್ದೆ ಮೇಲೆ ಭಾರತಿ ಶಂಕರ, ಸುಷ್ಮಾ ರಾಜಗೋಪಾಲ, ಕಮಲಾಕ್ಷಿ ರಾಜಣ್ಣ, ಪುಷ್ಪಾ ಅಮರನಾಥ ಸೇರಿದಂತೆ ಹಲವು ನಾಯಕಿಯರೂ ಕಣ್ಣಿಟ್ಟಿದ್ದು, ವರಿಷ್ಠರ ಮೇಲೆ ನಿರಂತರ ಒತ್ತಡ ಮುಂದುವರಿದಿದೆ.

ಇನ್ನು ಒಕ್ಕಲಿಗ ಸಮುದಾಯದ ಮಹಿಳೆಗೆ ಅಧ್ಯಕ್ಷ ಗಾದಿ ನೀಡಬೇಕು ಎಂದೂ ಒಂದು ಗುಂಪು ವಾದ ಮಂಡಿಸುತ್ತಿದೆ. ಈ ನಡುವೆ ಬೆಂಗಳೂರು ಕೇಂದ್ರೀಕೃತ ಮಹಿಳೆಗೆ ಈ ಸ್ಥಾನ ನೀಡಬೇಕೆಂದು ವರಿಷ್ಠರು ಚಿಂತನೆ ನಡೆಸಿದ್ದಾರೆಂದೂ ಹೇಳಲಾಗುತ್ತಿದೆ.

ಹೆಬ್ಬಾಳಕರ ಪ್ರಭಾವ ಕುಗ್ಗಿಸಲು ಈ ಎಲ್ಲಾ ಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗಿದ್ದು, ಮುಂದೇನಾಗುತ್ತದೆಯೋ ಕಾದು ನೋಡಬೇಕು.

Leave a Reply

Your email address will not be published.