ಮಹಾತ್ಮಾ ಗಾಂಧೀಜಿ ಕಲಬುರಗಿಗೂ ಬಂದಿದ್ರು!


ಹೈದರಾಬಾದ್ ನಿಜಾಂ ಆಳರಸರ ಆಳ್ವಿಕೆಗೆ ಒಳಪಟ್ಟಿದ್ದ ಕಲಬುರಗಿ ನಗರಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದರು….!

ಸ್ವಾತಂತ್ರ್ಯ ಸಂಗ್ರಾಮವನ್ನು ಬೆಂಬಲಿಸಿದ್ದ ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಬಗ್ಗೆ ಕೆಲವು ಮುಸ್ಲಿಂ ಕೋಮುವಾದಿಗಳು ತಪ್ಪು ತಿಳಿದುಕೊಂಡಿದ್ದರು. ದೊಡ್ಡಪ್ಪ ಅಪ್ಪ ಅವರು ಕೈಗೊಂಡಿದ್ದ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ನಿಜಾಂ ಸರ್ಕಾರ ಶರಣಬಸವೇಶ್ವರ ದೇವಸ್ಥಾನದ ಮೇಲೆ ದಾಳಿ ನಡೆಸಿತ್ತು. ನೆರೆಯ ಬೀದರ್‍ನಲ್ಲಿ ಕೂಡ ಗಲಾಟೆ ಆಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಈ ವಿಷಯ ಕೇಳಿ ನೊಂದ ಮಹಾತ್ಮಾ ಗಾಂಧೀಜಿಯವರು ಪತ್ನಿ ಕಸ್ತೂರಬಾ ಅವರ ಜತೆ 1927, ಪೆಭ್ರುವರಿ 27ರಂದು ಗುಲ್ಬರ್ಗಕ್ಕೆ ಭೇಟಿ ನೀಡಿದ್ದರು. ನಗರದ ಶರಣ ಬಸವೇಶ್ವರ ದೇವಸ್ಥಾನ, ಖವಾಜಾ ಬಂದೇನವಾಜ್ ದರ್ಗಾ, ನೂತನ ವಿದ್ಯಾಲಯ ಸಂಸ್ಥೆ, ಜಗತ್ ವೃತ್ತದ ಬಳಿ ಇರುವ ಭೀಮನಗರಗಳಿಗೆ ಭೇಟಿ ನೀಡಿ ಸಾಮರಸ್ಯದ ಸಭೆ ನಡೆಸಿದ್ದರು.

ಈಗಿನ ಲಾಹೋಟಿ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಬಾಲ್ ಘಾಟ್ ಸ್ಥಳದಲ್ಲಿದ್ದ ಹೀರಾಲಾಲ್ ಸೇಠ್ ಎಂಬುವವರ ಮನೆಯಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದರಂತೆ! ಆಗ ಮೆರವಣಿಗೆ ಮೂಲಕ ಇಲ್ಲಿಗೆ ಆಗಮಿಸಿದ್ದರು ಎಂದು ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಹೇಳುತ್ತಾರೆ.

ಭೀಮನಗರದಲ್ಲೂ ಕೂಡ ಸವರ್ಣೀಯರು ಹಾಗೂ ದಲಿತರನ್ನು ಸೇರಿಸಿ ಅಸ್ಪೃಶ್ಯತಾ ನಿವಾರಣೆ ಸಭೆ ನಡೆಸಿದ್ದರು.  ಖ್ವಾಜಾ ಬಂದೇನವಾಜ್ ದರ್ಗಾಕ್ಕೂ ಭೇಟಿ ನೀಡಿ ಭಾವೈಕ್ಯ ಮಂತ್ರ ಬೋಧಿಸಿದ್ದರು. ನಗರದ ಎನ್.ವಿ. ಕನ್ಯಾ ಶಾಲೆಯ ಆವರಣದಲ್ಲಿದ್ದ ಅರಳಿ ಮರದ ಕೆಳಗೆ ಮಹಿಳೆಯರ ಸಭೆ ಖಾದಿವಸ್ತ್ರದ ಉಪಯೋಗ ಹಾಗೂ ಸಾಮರಸ್ಯದ ಬದುಕಿನ ಕುರಿತುಸಭೆ ನಡೆಸಿದ್ದರು. ಇದಾದ ಬಳಿಕ ಬ್ರಹ್ಮಪುರದ ಅನಂತಶಯನ ದೇವಸ್ಥಾನದಲ್ಲಿ ರಾತ್ರಿ ಪತ್ನಿ ಸಮೇತ ಮೊಕ್ಕಾಂ ಹೂಡಿದ್ದರು ಎಂದು ಹೇಳಲಾಗುತ್ತಿದೆ.

ಆದರೆ ಗಾಂಧೀಜಿಯವರು ಕಲಬುರಗಿಗೆ ಭೇಟಿ ನೀಡಿದ ಕುರುಹುಗಳು ಇದೀಗ ಒಂದೂ ಉಳಿದಿಲ್ಲ. (ದೊಡ್ಡಪ್ಪ ಅಪ್ಪ ಅವರೊಂದಿಗಿನ ಮಾತುಕತೆಯ ಫೋಟೊ ಹೊರತುಪಡಿಸಿ) ಕೇವಲ ದಿನಾಚರಣೆಗೆ ಮಾತ್ರ ಸೀಮಿತ ಇಲ್ಲವೇ ಗೋಡೆಯ ಮೇಲೆ ಚಿತ್ರವಾಗಿ ಮಾತ್ರ ಉಳಿದಿರುವ ಗಾಂಧೀಜಿಯವರ ಮೂರ್ತಿ ಸರ್ವಾಜನಿಕ ಉದ್ಯಾನದ ಇಂದಿರಾ ಸ್ಮಾರಕ ಭವನದ ಆವರಣದಲ್ಲಿ ಸಣ್ಣದಾಗಿರುವ ಪ್ರತಿಮೆ ಬಿಟ್ಟರೆ ಇಲ್ಲಿ ಯಾವುದೇ ಕುರುಹುಗಳಿಲ್ಲ.

ಗಾಂಧೀಜಿಯವರ ಹೆಸರಿನಲ್ಲಿ ವರ್ಷಕ್ಕೊಮ್ಮೆ ನಗರದ ಕನ್ನಡ ಭವನದಲ್ಲಿ ಖಾದಿ ಉತ್ಸವ ನಡೆಯುತ್ತದೆ. ಜಯಂತಿಯಂದು ಎಲ್ಲ ಕಡೆ ಅವರ ಫೋಟೊ ಪೂಜೆ ಮಾಡುವುದನ್ನು ಬಿಟ್ಟರೆ ನಮಗೆ ಗಾಂಧೀಜಿ ನಮಗೆ ನೆನಪಾಗುವುದು ಕಡಿಮೆಯೇ!

ದೇಶಕ್ಕೆ ಸ್ವಾತಂತ್ರ್ಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮಾ ಗಾಂಧೀಜಿಯವರ ಸವಿ ನೆನಪಿಗಾಗಿ ಇಲ್ಲೊಂದು ಪುತ್ಥಳಿ ಇಲ್ಲವೇ ಮೂಸಿಯಂ ಸ್ಥಾಪನೆಯಾಗಬೇಕು ಎಂಬುದು ಅನೇಕ ಹಿರಿಯ ಜೀವಿಗಳ ಒತ್ತಾಯವಾಗಿದೆ. ಇದೇ ವೇಳೆಗೆ ಗಾಂಧೀಜಿಯವರ ವಿಚಾರಗಳನ್ನು ಮನೆ ಮನಗಳಿಗೆ ತಲುಪಿಸುವ ಕೆಲಸವೂ ಆಗಬೇಕಿದೆ.

-ಶಿವರಂಜನ್ ಸತ್ಯಂಪೇಟೆ

Leave a Reply

Your email address will not be published.