ಸಾಹಿತಿಗಳನ್ನ ಅಕಾಡೆಮಿಕ್ ನಾನ್ ಅಕಾಡೆಮಿಕ್ ಆಗಿ ವರ್ಗೀಕರಿಸುತ್ತಿರುವುದು ದುರಂತ: ಅರವಿಂದ ಮಾಲಗತ್ತಿ


ಕಲಬುರಗಿ: ಸಾಹಿತ್ಯವನ್ನು ವರ್ಗೀಕರಿಸಿದಂತೆ ಸಾಹಿತಿಗಳನ್ನು ಸಹ ಅಕಾಡೆಮಿಕ್, ನಾನ್ ಅಕಾಡೆಮಿಕ್ ಎಂದು ವರ್ಗೀಕರಿಸುತ್ತಿರುವುದು ದುರಂತದ ಸಂಗತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಅರವಿಂದ ಮಾಲಗತ್ತಿ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಹರಿಹರ ಸಭಾಂಗಣದಲ್ಲಿ ಮಂಗಳವಾರ ನಡೆದ ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ವಿಮರ್ಶಕರಿಗೆ ಮೂರನೇ ಕಣ್ಣು ಇರಬೇಕು (ಭವಿಷ್ಯ)ತ್ತಿಕರಣ ಆಲೋಚನಾ ಕ್ರಮಗಳನ್ನು ಅರ್ಥಮಾಡಿಕೊಳ್ಳಬೇಕು. ಆರ್ಥಿಕ ವ್ಯವಸ್ಥೆ ಬದಲಾವಣೆಯಿಂದಾಗಿ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.ಇನ್ನೂ ಕೆಲವರು ಹಣ ಕೊಳ್ಳೆ ಹಿಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ. ರಾಜಕೀಯ- ಸಾಮಾಜಿಕ ಪರಿಸ್ಥಿತಿ ಏರು ಪೇರಾಗಿದೆ.

ಆರ್ಥಿಕ ಉದಾರೀಕರಣಕ್ಕಿಂತ ಆರ್ಥಿಕ ಭಯೋತ್ಪಾದನೆ ಭಯಾನಕವಾಗಿದೆ. ಮಾಧ್ಯಮಗಳು, ಸಾಹಿತಿಗಳು ಕಾರ್ಪೋರೇಟ್ ಕ್ಷೇತ್ರದ ಕಕ್ಷೆಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಒಟಗುಟ್ಟುವ ಗಿಳಿ ಗಳಾಗಿದ್ದಾರೆ. ಇಂದು ಮಾರುಕಟ್ಟೆಯ ಸಾಹಿತ್ಯ ಬೆಳೆದು ನಿಂತಿದೆ. ಬ್ರಮಾತ್ಮಕ ಜಗತ್ತಿನಲ್ಲಿ ತೇಲಾಡುವ ಲೇಖಕರೂ ಇದ್ದಾರೆ. ಈ ಮಧ್ಯೆ ಕೆಲವರು ಸಾಹಿತ್ಯದಲ್ಲಿ ತಂತ್ರಜ್ಞಾನ ಬಳಸಿದ್ದು, ಬಹಳ ಮಹತ್ವದ್ದಾಗಿದೆ. ಸಮಾಜ ಹೇಗಿದೆ ಎಂಬುದು ಅರಿವಿಗೆ ಬಂದರೆ ಸಾಹಿತ್ಯ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಐಟಿಬಿಟಿ ಕ್ಷೇತ್ರದ ಈ ಲೇಖಕರು ಜಾತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ ಅದೇ ವೇಳೆಗೆ ಮೀಸಲಾತಿ ಬೇಡ ಎನ್ನುತ್ತಿರುವ ಸಾಹಿತ್ಯದ ವರ್ಗ ಹುಟ್ಟಿಕೊಳ್ಳುತ್ತಿದೆ. ಹೊಸ ತಂತ್ರಜ್ಞಾನದ ಸಾಹಿತ್ಯ ಸ್ವರೂಪ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ ಎಂದು ವಿವರಿಸಿದರು.

ಅನಿವಾಸಿ ಭಾರತೀಯರ ಬರಹ ಬಹಳ ಅಪ್ಯಾಯಮಾನ ಅನ್ನಿಸುತ್ತಿದೆ. ಅದ್ಭುತವಾಗಿ ಮೂಡಿಬರುತ್ತಿದೆ. ಹೀಗಾಗಿ ಏಕೀಕೃತಗೊಂಡ ನಿಜವಾದ ನವ್ಯ ಈಗ ಪ್ರಾರಂಭವಾಗುತ್ತಿದೆ. ಇದು ಅಗತ್ಯ ಕೂಡ ಅನ್ನಿಸುತ್ತಿದೆ ಎಂದರು. ಗಾಂಧಿ ಮತ್ತು ಅಂಬೇಡ್ಕರ್ ತತ್ವ ಈಗಿನ ತುರ್ತು ಎಂದು ಅವರು ತಿಳಿಸಿದರು.

ಆಶಯ ಭಾಷಣ ಮಾಡಿದ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ರೆಹಮತ್ ತರೀಕರೆ ಅವರು, ಜನಪದರ ಬದುಕಿನಲ್ಲಾದ ಪ್ರವೃತ್ತಿಗಳನ್ನು ಗಮನಿಸಬೇಕಾಗಿರುವುದು ಕೂಡ ಅಗತ್ಯವಾಗಿದೆ ಎಂದು ತಿಳಿಸಿದರು.

ಧರ್ಮಗಳು ವಿಕಾರಗೊಳ್ಳುತ್ತಿವೆ. ಆಹಾರದ ಹೆಸರಿನಲ್ಲಿ ದೊಂಬಿ, ಮಹಿಳೆಯರ ಮೇಲಿನ ಅತ್ಯಾಚಾರ ಇವುಗಳ ಬಗ್ಗೆ ಕೂಡ ಪ್ರತಿಕ್ರಿಯೆ ನಡೆಯುತ್ತಿದೆ. ಡಿಸಿಟಲ್ ಓದು ನಡೆಯುತ್ತಿದೆ. ಓದಿಗಿಂತ ನೋಡುವಿಕೆ, ಕೇಳುವಿಕೆ ಮುಂಚೂಣಿಗೆ ಬರುತ್ತಿದೆ. ಇದೆಲ್ಲವೂ ಕನ್ನಡ ಸಾಹಿತ್ಯ ಲೋಕದಲ್ಲಾದ ಬದಲಾವಣೆ ಎಂದು ಅವರು ಗುರುತಿಸಿದರು.

ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯ ಡಾ. ವಿಕ್ರಮ ವಿಸಾಜಿ ಪ್ರಾಸ್ತಾವಿಕ ಮಾತನಾಡಿದರು. ಅಕಾಡೆಮಿ ಸದಸ್ಯೆ ಡಾ. ಶಿವಗಂಗಾ ರುಮ್ಮಾ ಸ್ವಾಗತಿಸಿದರು. ಡಾ. ವಸಂತ ನಾಶಿ ನಿರೂಪಿಸಿದರು.

Leave a Reply

Your email address will not be published.