ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಜೆಡಿಎಸ್ ಜತೆ ಬಿಎಸ್ ಪಿ ದೋಸ್ತಿ ಇಲ್ಲ?


ಚಾಮರಾಜನಗರ: ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ದೋಸ್ತಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಘೋಷಿಸಿರುವ ಬೆನ್ನಲ್ಲೇ ಬಿಎಸ್ ಪಿಯಿಂದ ಆಯ್ಕೆಯಾಗಿ ದೋಸ್ತಿ ಸರಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿರುವ ಎನ್ .ಮಹೇಶ ಹೊಸ ಬಾಂಬ್ ಸಿಡಿಸಿದ್ದಾರೆ.

ಜೆಡಿಎಸ್ ನೊಂದಿಗೆ ಮಾಡಿಕೊಂಡಿದ್ದ ಮೈತ್ರಿ ವಿಧಾನಸಭೆಗಷ್ಟೇ ಸೀಮಿತ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಕಣಕ್ಕಿಳಿಯಲಿದೆ ಎಂದು ಅವರು ಚಾಮರಾಜನಗರದಲ್ಲಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ , ಜೆಡಿಎಸ್ , ಬಿಜೆಪಿ ಮೂರೂ ಪಕ್ಷಗಳೂ ಜಾತಿ ವ್ಯವಸ್ಥೆಗೆ ಜೋತು ಬಿದ್ದಿವೆ. ಶೋಷಿತರ ನೆರವಿಗೆ ಬರಲು ಆ ಯಾವ ಪಕ್ಷಗಳಿಗೂ ಆಸಕ್ತಿ ಇಲ್ಲ.  ಈ ಹಿನ್ನೆಲೆಯಲ್ಲಿಯೇ ಬಹುಜನ ಸಮಾಜ ಪಕ್ಷ ಹುಟ್ಟಿಕೊಂಡಿದೆ. ಜಾತಿ ವ್ಯವಸ್ಥೆಗೆ ಅಂಟಿಕೊಂಡಿರುವ ಈ ಪಕ್ಷಗಳೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಟ ಮಾಡುತ್ತೇವೆ,

ಈ ಕುರಿತಂತೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಅಂತಿಮ ತೀರ್ಮಾನ ಪ್ರಕಟಿಸುತ್ತಾರೆ. ಕಾಂಗ್ರೆಸ್ -ಜೆಡಿಎಸ್ ಏನೇ ತೀರ್ಮಾನ ತೆಗೆದುಕೊಂಡರೂ ಪಕ್ಷದ ನಿರ್ಧಾರ ಬದಲಾಗುವುದಿಲ್ಲ ಎಂದು ಅವರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Leave a Reply

Your email address will not be published.