ಶೈಕ್ಷಣಿಕ ಕೇಂದ್ರವಾಗಿ ಮೂಡಲಕೊಪ್ಪಲು ಗ್ರಾಮ : ಸಚಿವ ಪುಟ್ಟರಾಜು


ಪಾಂಡವಪುರ: ಗ್ರಾಮೀಣ ಪ್ರದೇಶದ ರೈತರ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮೂಡಲಕೊಪ್ಪಲು ಗ್ರಾಮವನ್ನು ಈ ಭಾಗದ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡುವುದಾಗಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು.

ತಾಲೂಕಿನ ಮೂಡಲಕೊಪ್ಪಲು ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು,  ಮೂಡಲಕೊಪ್ಪಲು ಗ್ರಾಮದ ಸುತ್ತಲೂ ಸುಮಾರು ಹತ್ತು ಗ್ರಾಮಗಳ ರೈತರ ಮಕ್ಕಳು ಶಿಕ್ಷಣ ಪಡೆಯಲು ದೂರ ಪ್ರಯಾಣ ಮಾಡಬೇಕಿತ್ತು.  ಇದರಿಂದ ಹಲವಾರು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು.  ಇದನ್ನು ತಪ್ಪಿಸಲು ಇಲ್ಲಿಯೇ ಕಿತ್ತೂರು ರಾಣಿ ಚನ್ನಮ್ಮ ವಸತಿ ಸಹಿತ ಹೆಣ್ಣು ಮಕ್ಕಳ ಪ್ರೌಢಶಾಲೆ, ಕಾಲೇಜು ಮತ್ತು ಮುರಾರ್ಜಿ ವಸತಿ ಕಾಲೇಜು ಪ್ರಾರಂಭಿಸಲಾಗುವುದು ಎಂದರು.

12 ವರ್ಷದ ಹಿಂದೆಯೇ ಇಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕಿತ್ತು. ಆದರೆ ಕಟ್ಟಡ ನಿರ್ಮಾಣಕ್ಕೆ ಬೇಕಿದ್ದ ಜಮೀನು ವಿವಾದವನ್ನು ತಾಲೂಕಿನ ಪ್ರಮುಖ ನಾಯಕರೊಬ್ಬರು ಹುಟ್ಟು ಹಾಕಿದ್ದರಿಂದ ಕಾಮಗಾರಿ ಕುಂಠಿತವಾಯಿತು ಎಂದು ಮಾರ್ಮಿಕವಾಗಿ ನುಡಿದರು.

ವಸತಿ ಶಾಲೆಯ ಕಟ್ಟಡ ನಿರ್ಮಾಣ, ಹಾಸ್ಟೆಲ್ ಮತ್ತು ಶಿಕ್ಷಕರ ವಸತಿ ಸಮುಚ್ಛಯ ನಿರ್ಮಾಣಕ್ಕೆ 10 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈ ಭಾಗದಲ್ಲಿ ಒಂದು ಸಾರ್ವಜನಿಕ ಆಸ್ಪತ್ರೆ, ಪಶು ಚಿಕಿತ್ಸಾಲಯ, ಎಲ್ಲಾ ಗ್ರಾಮಗಳಿಗೂ ಕಾವೇರಿ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.

ಮೂಡಲಕೊಪ್ಪಲು ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟಾಗಿ ಸೇರಿ ತಮಗೆ ಅಗತ್ಯವಾಗಿ ಬೇಕಿರುವ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ಯೋಜನೆಗಳ ಬಗ್ಗೆ ವಿವರಗಳನ್ನು ನೀಡಿದರೆ ಕೂಡಲೇ ಮಂಜೂರು ಮಾಡಿಸುವುದಾಗಿ ಅವರು ಭರವಸೆ ನೀಡಿದರು.

ಜಕ್ಕನಹಳ್ಳಿ ಗ್ರಾಮದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್, ಮತ್ತು ಇದೇ ರೀತಿ ಬನ್ನಂಗಾಡಿ ಗ್ರಾಮದಲ್ಲಿ ಹೆಚ್ಚು ಬೆಳೆಯುವ ಹೂವುಗಳನ್ನು ಸಂರಕ್ಷಿಸಲು ಅಲ್ಲೂ ಸಹಾ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದಾಗಿ ಹೇಳಿದ ಸಚಿವರು, ಮೇಲುಕೋಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಇಡೀ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡುವ ಜವಾಬ್ದಾರಿ ತಮ್ಮ ಮೇಲಿದ್ದು, ಇದೇ ರೀತಿ ಇಡೀ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ನಿರ್ಮಾಣ ಮಾಡುವ ಜವಾಬ್ದಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲಿದೆ ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಪೂರೈಸುವುದಾಗಿ ಅವರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಾಲತಿ, ಉಪ ವಿಭಾಗಾಧಿಕಾರಿ ಶೈಲಜಾ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಅಶೋಕ್, ಎಚ್.ತ್ಯಾಗರಾಜು, ತಹಸಿಲ್ದಾರ್ ಡಿ.ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಶಂಕರ್, ತಾ.ಪಂ.ಇ.ಒ.ಮಹೇಶ್, ತಾ.ಪಂ.ಸದಸ್ಯ ಗೋಪಾಲಗೌಡ, ಜೆಡಿಎಸ್ ಮುಖಂಡರಾದ ಎಂ.ಬಿ.ಶ್ರೀನಿವಾಸ್, ಶಂಭೂನಹಳ್ಳಿ ಆನಂದ, ಸ್ವಾಮಣ್ಣ, ತಿಮ್ಮೇಗೌಡ, ರಾಮಚಂದ್ರ, ಪಾಪಣ್ಣ, ಪುಟ್ಟೇಗೌಡ, ದೇವೇಗೌಡ, ಅಶ್ವಥ್, ಚಿಕ್ಕಣ್ಣ, ಆನಂದ, ಚಿನಕುರಳಿ ಪ್ರಕಾಶ್ ಮುಂತಾದವರು ಇದ್ದರು.

Leave a Reply

Your email address will not be published.