ಸಾಮಾಜಿಕ ಬಹಿಷ್ಕಾರ: ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನ, ವಿಡಿಯೋ ವೈರಲ್ !


ವಿಜಯಪುರ: ಜಮೀನು ವಿವಾದದ ಹಿನ್ನೆಲೆಯಲ್ಲಿ ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಮನನೊಂದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ತಾಲೂಕಿನ ಹಂಚಿನಾಳ ತಾಂಡಾದಲ್ಲಿ ನಡೆದಿದೆ.

ಮಾತ್ರೆ, ವಿಷದ ಪುಡಿ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿರುವ ಯುವತಿ, ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕುಟುಂಬಕ್ಕೆ ಬಹಿಷ್ಕಾರ ಹಾಕಿರುವುದರಿಂದ ತನ್ನ ಮತ್ತು ಸಹೋದರನ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಮಾನಸಿಕ ಹಿಂಸೆಯಿಂದಾಗಿ ಓದು ಮುಂದುವರಿಸಲು ಆಗುತ್ತಿಲ್ಲ. ಬಹಿಷ್ಕಾರ ಹಾಕಿರುವ ಗ್ರಾಮದ ಹಿರಿಯರು ಮಾಜಿ ಸಚಿವ ಎಂ.ಬಿ. ಪಾಟೀಲರ ಹೆಸರು ಹೇಳಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಯುವತಿ ಲತಾ ಚಂದು ಚವ್ಹಾಣ ಫೇಸ್ ಬುಕ್ ಲೈವ್ ನಲ್ಲಿ ಆಪಾದಿಸಿದ್ದಾಳೆ.

ಈ ಬಹಿಷ್ಕಾರದಿಂದ ಆಗುತ್ತಿರುವ ಮಾನಸಿಕ ಹಿಂಸೆ ಕುರಿತಂತೆ ಪಿಎಸ್ ಐ ನಿಂದ ಹಿಡಿದು ಜಿಲ್ಲಾ ಪೊಲೀಸ್ ವರಿಷ್ಠರ ತನಕ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಖುದ್ದಾಗಿ ಎಂ.ಬಿ. ಪಾಟೀಲರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರೂ ಏನೂ ಉಪಯೋಗವಾಗಿಲ್ಲ. ಹೀಗಾಗಿ ಮನನೊಂದು ತಾನು ಆತ್ಮಹತ್ಯೆಗೆ ಶರಣಾಗುವುದಾಗಿ ಆಕೆ ಸ್ಪಷ್ಟವಾಗಿ ಹೇಳಿಕೊಂಡಿದ್ದಾಳೆ.

ಪ್ರಧಾನ ಮಂತ್ರಿ ಮೋದಿ ಬೇಟಿ ಪಢಾವೋ, ಬೇಟಿ ಬಚಾವೋ ಎಂದು ಹೇಳುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ನಾವು ಹೇಗೆ ಓದಬೇಕು? ಹೇಗೆ ಬದುಕಬೇಕು? ಎಂದೂ ಯುವತಿ ಫೇಸ್ ಬುಕ್ ಲೈವ್ ನಲ್ಲಿ ಆಕ್ರೋಷದಿಂದಲೇ ಪ್ರಶ್ನಿಸಿದ್ದಾಳೆ.

ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಿಜಿಟಲ್ ಯುಗದಲ್ಲಿಯೂ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠ ಪದ್ಧತಿಗಳು ಜಾರಿಯಲ್ಲಿರುವುದು ಹೇಸಿಗೆ ಬರುವಂತೆ ಮಾಡಿದೆ.

Leave a Reply

Your email address will not be published.