ಚಿಕ್ಕೋಡಿಯಲ್ಲಿ ಕೆಎಲ್ಇ ಸಂಸ್ಥೆಯ ಸಿಬಿಎಸ್ಸಿ ಶಾಲಾ ಕಟ್ಟಡ ಕಾಮಗಾರಿಗೆ ಡಾ. ಕೋರೆ ಚಾಲನೆ


ಚಿಕ್ಕೋಡಿ: ಗ್ರಾಮೀಣ ಪ್ರದೇಶದ ಕಟ್ಟಕಡೆಯ ಜನರಿಗೂ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಚಿಕ್ಕೋಡಿ ಪಟ್ಟಣದಲ್ಲಿ ಕೆಎಲ್‍ಇ ಸಂಸ್ಥೆ ಸಿಬಿಎಸ್‍ಸಿ ಶಾಲೆ ಆರಂಭಿಸುತ್ತಿದೆ ಎಂದು ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷರು ಮತ್ತು ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.

ಪಟ್ಟಣದಲ್ಲಿ ಕೆಎಲ್‍ಇ ಸಂಸ್ಥೆ ಆರಂಭಿಸುತ್ತಿರುವ ಸಿಬಿಎಸ್‍ಸಿ ಶಾಲೆಯ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸುಮಾರು 10 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.

ಚಿಕ್ಕೋಡಿ ಪಟ್ಟಣದಲ್ಲಿ ಕೆಎಲ್‍ಇ ಸಂಸ್ಥೆ ಈ ಭಾಗದ ಜನರಿಗೆ ಆರೋಗ್ಯ ಸೇವೆ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಚಿಕ್ಕೋಡಿ ಪಟ್ಟಣದಲ್ಲಿ ಕೆಎಲ್‍ಇ ಸಂಸ್ಥೆಯ ಆಸ್ಪತ್ರೆ ಆರಂಭಿಸಿದೆ. ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳನ್ನು ಇಲ್ಲಿ ಆರಂಭಿಸಲಾಗಿದೆ. ಇದೀಗ ಸುಮಾರು 5.50 ಎಕರೆ ಪ್ರದೇಶದಲ್ಲಿ ಸಿಬಿಎಸ್‍ಸಿ ಶಾಲೆ ಆರಂಭಗೊಳ್ಳುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ರಾಜ್ಯ ಸಭಾ ಸದಸ್ಯರು ಮತ್ತು ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದಿರುವ ಕೆಎಲ್‍ಇ ಸಂಸ್ಥೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ಭಾಗಕ್ಕೆ ಆಸ್ಪತ್ರೆ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದು, ಇದೀಗ ಸುಮಾರು 10 ಕೋಟಿ ವೆಚ್ಚದ ಸಿಬಿಎಸ್‍ಸಿ ಶಾಲೆಯನ್ನು ಕೆಎಲ್‍ಇ ಸಂಸ್ಥೆ ಗಡಿ ಭಾಗದ ಜನರಿಗೆ ಒಂದು ಕೊಡುಗೆಯಾಗಿದೆ ನೀಡಿದೆ ಎಂದು ಹೇಳಿದರು.

ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕೆಎಲ್‍ಇ ಸಂಸ್ಥೆ ನಿರ್ದೇಶಕ ಬಿ.ಆರ್.ಪಾಟೀಲ, ಸೌಹಾರ್ದ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಮಹೇಶ ಭಾತೆ, ಶ್ರೀಕಾಂತ ಚನ್ನವರ, ಎಸ್.ಎಸ್.ಕವಲಾಪೂರೆ, ಸಂಜು ಕವಟಗಿಮಠ, ಷಡಕ್ಷರಿ ಮೂಗೇರಿ, ಅಶೋಕ ಹಂಪನ್ನವರ, ಎನ್.ಎಸ್.ವಂಟಮುತ್ತೆ, ಅಕ್ರಂ ಅರ್ಕಾಟೆ, ಪ್ರಾಚಾರ್ಯರಾದ ಡಾ. ಸಿದ್ರಾಮಪ್ಪಾ ಇಟ್ಟಿ,ಭಾರತಿ ಪಾಟೀಲ, ಎಂ.ಟಿ.ಕುರಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.