ಜಿಲ್ಲಾಧಿಕಾರಿ ದೀಪಾ ಚೋಳನ್ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ವಾಸ್ತವ್ಯ


ಧಾರವಾಡ: ಇದೇ ಮೊದಲ ಭಾರಿಗೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಗ್ರಾಮ ವಾಸ್ತವ್ಯ ಮಾಡಿದ್ದು, ಶನಿವಾರ ರಾತ್ರಿ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು.

ಗ್ರಾಮದ ಮೊದಲ ಬಸ್ ನಿಲ್ದಾಣದ ಬಳಿ ಇಡೀ ಜಿಲ್ಲಾಡಳಿತವೇ ಜಿಲ್ಲಾಧಿಕಾರಿಯೊಂದಿಗೆ ಬಂದಿಳಿದ ನಂತರ ಗ್ರಾಮಸ್ಥರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಅದ್ಧೂರಿಯಿಂದ ಬರಮಾಡಿಕೊಂಡರು.

ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಧಿಕಾರಿ ದೀಪಾ ಅವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಈಗಾಗಲೇ ನೂಲ್ವಿ ಹಾಗೂ ಹಿರೇಹೊನ್ನಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಅಲ್ಲಿ ಸ್ಥಳೀಯವಾಗಿ ಇದ್ದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇದೀಗ ಮೂರನೇ ಭಾರಿಗೆ ಉಪ್ಪಿನ ಬೆಟಗೇರಿಯಲ್ಲಿ ವಾಸ್ತವ್ಯ ಮಾಡುವ ಮೂಲಕ ಅಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ.

ಶನಿವಾರ ರಾತ್ರಿ ಗ್ರಾಮಕ್ಕೆ ಆಗಮಿಸಿದ ಅವರನ್ನು ಗ್ರಾಮದ ವಿವಿಧ ಶಾಲಾ ಮಕ್ಕಳನ್ನು ಬ್ಯಾಂಡ್ ಗಳನ್ನು ಬಾರಿಸುವ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡರು. ಹೆಣ್ಣು ಮಕ್ಕಳು ಕುಂಭ ಹೊತ್ತು ಸಾಗುವ ಮೂಲಕ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ನಂತರ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಔಷಧಿ ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಉಪ್ಪಿನ ಬೆಟಗೇರಿಯಲ್ಲಿ ಕೋಮು ಸೌಹಾರ್ಧತೆ ಹೆಚ್ಚಾಗಿದೆ ಎಂಬುದನ್ನು ಕೇಳಿ ಬಹಳ ಸಂತೋಷವಾಯಿತು. ಅದೂ ಅಲ್ಲದೇ ಈ ಗ್ರಾಮದಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತ ಸರಿಸಮನಾಗಿದೆ ಎಂಬುದೂ ವಿಶೇಷ. ಈಗಾಗಲೇ ನಾನು ಎರಡು ಕಡೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಆದರೆ, ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸೇರಿದಷ್ಟು ಹೆಣ್ಣು ಮಕ್ಕಳು ಉಳಿದ ಕಡೆಗಳಲ್ಲಿ ಸೇರಿರಲಿಲ್ಲ. ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳನ್ನು ಕೇಳಬೇಕು ಎಂಬ ಸರ್ಕಾರದ ನಿಯಮವಿದ್ದು, ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಹೇಳಿದಲ್ಲಿ ಸ್ಥಳೀಯವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು. ಎರಡ್ಮೂರು ದಿನ ಕೈ ಹಿಡಿಯುವ ಕೆಲಸಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಮ್ಮಿನಬಾವಿಯಿಂದ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಪೈಪಲೈನ್ ಅಳವಡಿಸುವ ಸಂಬಂಧ ಕ್ರಿಯಾಯೋಜನೆ ರೂಪಿಸಲಾಗಿದ್ದು, ಇಲಾಖಾ ಹಂತದಲ್ಲಿ ಈ ಕೆಲಸ ತ್ವರಿತಗತಿಯಲ್ಲಿ ಆಗುವಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು. ಇಡೀ ಜಿಲ್ಲಾಡಳಿತವೇ ಒಂದು ಗ್ರಾಮಕ್ಕೆ ಬಂದಾಗ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿ ಬಗೆಹರಿಸಿಕೊಳ್ಳಬೇಕು ಎಂದರು.

ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 

Leave a Reply

Your email address will not be published.