ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ


ಬೆಂಗಳೂರು:ಅಂಬೆಡೆಂಟ್ ಸಂಸ್ಥೆ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಬೇಕಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ (ನ. 12) ಮುಂದೂಡಿದೆ.

ರೆಡ್ಡಿ ಪರ ವಾದ ಮಂಡಿಸಿದ ಸಿ.ಎಚ್. ಹನುಮಂತರಾಯ ಪ್ರರಕಣದಲ್ಲಿ ಮೇಲುನೋಟಕ್ಕೆ ಬಂಧನದ ಭೀತಿ ಕಾಣುತ್ತಿಲ್ಲ. ಪ್ರಖರ ಕಾರಣಗಳೂ ಇಲ್ಲ ಎಂದು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾತ್ರ ಹಿಂದಕ್ಕೆ ಪಡೆದುಕೊಂಡರು. ಆದರೆ, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿತು.

ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದರೆ ನ. 11 ರಂದೇ ರೆಡ್ಡಿ ವಿಚಾರಣೆಗೆ ಹಾಜರಾಗುತ್ತಾರೆ ಎಂಬ ಭರವಸೆಯನ್ನೂ ಹನುಮಂತರಾಯ 61 ನೇ  ಸಿಟಿಸಿವಿಲ್ ನ್ಯಾಯಾಲಯಕ್ಕೆ ನೀಡಿದರು.

ವಿಚಾರಣೆಗೆ ಹಾಜರಾದ ತಕ್ಷಣ ಬಂಧಿಸುತ್ತಾರೆ ಎಂದು ಹೇಗೆ ಹೇಳುತ್ತೀರಿ ಎಂದು ನ್ಯಾಯಾಧೀಶರು ರೆಡ್ಡಿ ಪರ ವಕೀಲರಿಗೆ ಪ್ರಶ್ನಿಸಿದರು. ಆಗ ವಕೀಲರು ಪೊಲೀಸ್ ಆಯುಕ್ತರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ನು ಓದಿ ಹೇಳಿದರು. ಪತ್ರಿಕಾ ಹೇಳಿಕೆ ಮೇಲೆ ಬಂಧನವಾಗುತ್ತದೆ ಎಂದು ಹೇಗೆ ಹೇಳುತ್ತೀರಿ ಎಂದು ಮರುಪ್ರಶ್ನೆ ಹಾಕಿದರು.

ಪೊಲೀಸರು ಈಗ ನೋಟೀಸ್ ಕೂಡ ನೀಡಿದ್ದಾರೆ ಎಂದು ಹನುಮಂತರಾಯ ಕೋರ್ಟಿಗೆ ತಿಳಿಸಿದರು. ಆದರೆ, ಮೇಲುನೋಟಕ್ಕೆ ರೆಡ್ಡಿ ಬಂಧನದ ಭೀತಿ ಕಾಣುತ್ತಿಲ್ಲ. ಪ್ರಮುಖ ಕಾರಣಗಳೂ ಕಾಣಿಸುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದ ರೆಡ್ಡಿ ಪರ ನ್ಯಾಯವಾಗಿ, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಮನವಿ ಮಾಡಿದರು. ನ್ಯಾಯಾಧೀಶರು ಅದಕ್ಕೆ ಒಪ್ಪಿ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದರು.

ಏತನ್ಮಧ್ಯೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಜನಾರ್ದನರೆಡ್ಡಿಗೆ ನೋಟೀಸು  ಜಾರಿ ಮಾಡಿದ್ದಾರೆ. ಒಟ್ಟಾರೆಯಾಗಿ ಸೋಮವಾರದವರೆಗೆ ರೆಡ್ಡಿ ನಿಟ್ಟುಸಿರು ಬಿಡುವಂತಾಗಿದೆ.

Leave a Reply

Your email address will not be published.