ಅಕ್ರಮ ಮರಳು ಸಂಗ್ರಹಿಸುವವರ ಮೇಲೆ ಕೇಸ್ ಹಾಕಿ: ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ


ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿಟ್ಟುಕೊಂಡಿರುವಂತಹ ಜಮೀನುಗಳ ಮಾಲೀಕರ ಮೇಲೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯಲ್ಲಿ  ಮಾತನಾಡಿ,  ಕಲಬುರಗಿ ಜಿಲ್ಲೆಯ ವಿವಿಧೆಡೆ ವ್ಯಾಪಕವಾಗಿ ಅಕ್ರಮ ಮರಳು ಸಾಗಣೆ ಮತ್ತು ಸಂಗ್ರಹಣೆ ಕುರಿತು ದೂರು ಕೇಳಿಬರುತ್ತಿವೆ. ಮುಂದಿನ 2-3 ದಿನಗಳಲ್ಲಿ ಅಕ್ರಮ ಸಂಗ್ರಹಣೆ ಸ್ಥಳಗಳಿಗೆ ಸಹಾಯಕ ಆಯುಕ್ತರು, ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಸಂಬಂಧಿಸಿದ ಜಮೀನು ಮಾಲೀಕರ ಮೇಲೆ ಹಾಗೂ ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲಿಸಿ ನವೆಂಬರ್ 5 ರೊಳಗೆ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಮರಳು ಸಾಗಾಣಿಕೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಟ್ರಾಕ್ಟರ್, ಟಿಪ್ಪರ್ ವಾಹನಗಳ ಪರವಾನಿಗೆಯನ್ನು ಕೂಡಲೇ  ಅಮಾನತ್ತುಗೊಳಿಸಿ ನಂತರ ನಿಯಮದ ಪ್ರಕಾರ ರದ್ದುಗೊಳಿಸುವಂತೆ ಆರ್.ಟಿ.ಓ. ಅಧಿಕಾರಿಗಳಿಗೆ ತಾಕೀತು ಮಾಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳು ಸಂಗ್ರಹಣೆ ಪ್ರದೇಶಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲಿಸಬೇಕು ಎಂದ ಸಚಿವರು ಈಗಾಗಲೆ ವಶಕ್ಕೆ ಪಡೆದ ಅಕ್ರಮ ಮರಳನ್ನು ಸರ್ಕಾರಿ ಯೋಜನೆಗಳಿಗೆ ಬಳಸಲು ವಿಲೇವಾರಿಗೆ ಸೂಕ್ತ ಕ್ರಮ ವಹಿಸಬೇಕು ಎಂದರು.

ಮರಳು ಮಾಫಿಯಾಗೆ ಕಡಿವಾಣ ಹಾಕಿ:

ಜಿಲ್ಲೆಯ ಯಾವ ಪ್ರದೇಶದಲ್ಲಿ ಅಕ್ರಮವಾಗಿ ಮರಳು, ಮುರುಮ್, ಜಲ್ಲಿಕಲ್ಲು ಸಾಗಾಣಿಕೆ ನಡೆಯುತ್ತದೆ ಎಂಬುದರ ಕುರಿತು ಪೊಲೀಸ್, ಕಂದಾಯ, ಲೋಕೋಪಯೋಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದರು ಕ್ರಮ ಕೈಗೊಳ್ಳದಿರುವುದು ದುರಾದೃಷ್ಠ. ಕೂಡಲೇ ಮರಳು ಮಾಫಿಯಾಗೆ ಕಡಿವಾಣ ಹಾಕಿ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮಕೈಗೊಳ್ಳಿ. ಕಲಬುರಗಿ ಮತ್ತು ಸೇಡಂ ಕಂದಾಯ ವಿಭಾಗದ ಸಹಾಯಕ ಆಯುಕ್ತರು ಅಕ್ರಮ ಮರಳು ಪತ್ತೆಗೆ ನಿರಂತರ ದಾಳಿ ಮಾಡಬೇಕು. ಅಕ್ರಮ ಮರಳು ಸಾಗಾಣೆ ನಿಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಗೆ ಸಲೀಸಾಗಿ ಮರಳು ಸಿಗುವಂತಾಗಲಿ:

ಸಾರ್ವಜನಿಕರು ಮನೆ, ಕಟ್ಟಡಗಳನ್ನು ಕಟ್ಟಲು ಸರಳವಾಗಿ ಮರಳು ಲಭ್ಯವಾಗುತ್ತಿಲ್ಲ. ಅನಾವಶ್ಯಕವಾಗಿ ಮರಳಿಗೆ ಹೆಚ್ಚಿನ ಹಣ ವ್ಯಯ ಮಾಡುತ್ತಿದ್ದಾರೆ. ಸ್ಯಾಂಡ್ ಮಾಫಿಯಾ ನಿಯಂತ್ರಿಸಿ ಸಾರ್ವಜನಿಕರಿಗೆ ಸಲೀಸಾಗಿ ಮರಳು ಪಡೆಯುವಂತಾಗಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕಾಗಿ ಆಗಾಗ ದಾಳಿ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಫಜಲಪುರ, ಚಿತ್ತಾಪುರ ಮತ್ತು ಜೇವರ್ಗಿಯಲ್ಲಿ ಅಕ್ರಮ ಮರಳು ಸಾಗಾಟ ಬಗ್ಗೆ ಹೆಚ್ಚಿನ ದೂರುಗಳಿವೆ. ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗುವವರ ಮೇಲೆ ಎಫ್.ಐ.ಆರ್. ದಾಖಲು ಹಾಗೂ ವಾಹನವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಕಡ್ಡಾಯವಾಗಿದ್ದು, ಇದನ್ನು ಪೊಲೀಸ್ ಅಧಿಕಾರಿಗಳನ್ನು ತಪ್ಪದೆ ಕ್ರಮವಹಿಸಬೇಕು. ತಾಲೂಕು ಮರಳು ಸಮಿತಿ ಸದಸ್ಯರು ಆಗಾಗ ಅಕ್ರಮ ಮರಳು ಸಾಗಾಟ ಮಾಡುವವರ ಮೇಲೆ ದಾಳಿ ಮಾಡಬೇಕು ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕಾದೇವಿ ಮಾತನಾಡಿ ಜಿಲ್ಲೆಯಲ್ಲಿ ಕಳೆದ 2018ರ ಏಪ್ರಿಲ್ ದಿಂದ ಇಲ್ಲಿವರೆಗೆ 38000 ಮೆಟ್ರಿಕ್ ಟನ್ ಅಕ್ರಮ ಮರಳು ವಶಕ್ಕೆ ಪಡೆದು ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಐ.ಎ.ಎಸ್. ಪ್ರೊಬೇಷನರ್ ಸುಧಾಕರ ಸ್ನೇಹಲ್ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ, ಸಹಾಯಕ ಆಯುಕ್ತರಾದ ರಾಚಪ್ಪ, ಡಾ.ಬಿ.ಸುಶೀಲಾ, ಡಿವೈಎಸ್ಪಿ ಲೋಕೇಶ ಸೇರಿದಂತೆ ತಾಲೂಕಿನ ತಹಶೀಲ್ದಾರರು, ಡಿವೈ.ಎಸ್.ಪಿಗಳು, ಪೊಲೀಸ್ ಇನ್ಸಪೆಕ್ಟರ್‍ಗಳು, ಲೋಕೋಪಯೋಗಿ, ಆರ್.ಟಿ.ಓ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.