ಉರ್ದು ಕೇಂದ್ರಕ್ಕೆ ಶೀಘ್ರ ನಿವೇಶನ ಮಂಜೂರು: ಶಾಸಕ ಆನಂದ ನ್ಯಾಮಗೌಡ


ಜಮಖಂಡಿ:  ನಗರದಲ್ಲಿ ಉರ್ದು ಕೇಂದ್ರ ತೆರೆಯಲು ನಿವೇಶನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಆನಂದ ನ್ಯಾಮಗೌಡ ಭರವಸೆ ನೀಡಿದರು.

ಹಮದರ್ದ ಎಜುಕೇಶನಲ್ ಆ್ಯಂಡ್ ಸೋಸಿಯಲ್ ವೆಲ್‍ಫೇರ್ ಸೊಸೈಟಿ ಆಶ್ರಯದಲ್ಲಿ ಇಲ್ಲಿನ ಜಮಜಮ ಕಾಲೊನಿಯ ದಾರೈನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಉರ್ದು ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ರಾಜ್ಯದ ಉರ್ದು ಅಕಾಡೆಮಿಯ ಪುನರ್ ರಚನೆ ಸಂದರ್ಭದಲ್ಲಿ ಸ್ಥಳೀಯ ವಿದ್ವಾಂಸರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ದೇಶವಾಸಿಗಳನ್ನು ಒಗ್ಗೂಡಿಸುವ ಘೋಷಣೆಗಳನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿತ್ತು. ಹಾಗಾಗಿ ಸ್ವಾತಂತ್ರ್ಯಾನಂತರ ಉರ್ದುಗೆ ರಾಷ್ಟ್ರೀಯ ಭಾಷೆಯಾಗುವ ಎಲ್ಲ ಅರ್ಹತೆಗಳು ಇದ್ದವು. ಆದರೆ, ಕಾರಣಾಂತರಗಳಿಂದ ಹಾಗಾಗಲಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಎ.ಡಿ. ಝರತಾರಘರ ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ರಫಿ ಭಂಡಾರಿ ಮಾತನಾಡಿ, ಉರ್ದು ಶಾಲೆಗಳಲ್ಲಿ ಅರ್ಧಕ್ಕೆ ಓದು ನಿಲ್ಲಿಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಉರ್ದು ಶಿಕ್ಷಕರ ಕೊರತೆ ಉರ್ದು ಭಾಷೆಯ ಹಿನ್ನಡೆಗೆ ಕಾರಣಗಳಾಗಿವೆ ಎಂದರು.

ಕೊಪ್ಪಳದ ಉರ್ದು ಕವಿ ಮಜ್ಹಾರ ಮೊಹಿದ್ದಿನ್, ಸ್ಥಳೀಯ ಹಿರಿಯರಾದ ನಸರುದ್ದಿನ್ ಜಮಾದಾರ ಹಾಗೂ ಸ್ಥಳೀಯ ಉದ್ದಿಮೆದಾರ ಮಾಮೂನ ಪಾರ್ಥನಳ್ಳಿ ಮಾತನಾಡಿದರು.

ನಗರಸಭೆ ಸದಸ್ಯ ಮುಬಾರಕ ಅಪರಾದ, ನುಸರತ್ ಮೊಹಿದ್ದಿನ್, ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಸ್ಥಳೀಯ ಘಟಕದ ಅಧ್ಯಕ್ಷ ಜಾಕೀರ್ ನದಾಫ ಇತರರು ಇದ್ದರು. ಮೌಲಾನಾ ಅಮೀನುದ್ದಿನ್ ಖುರಾಣ ಪಠಣ ಮಾಡಿದರು. ಮೌಲಾನಾ ಯೂನುಸ್ ಹಾಸ್ಮಿ ಪ್ರಾರ್ಥನೆ ಗೀತೆ ಹಾಡಿದರು. ಸಯ್ಯದಮಹಿಮೂದ ಖಾದ್ರಿ ಸ್ವಾಗತಿಸಿದರು. ಬದ್ರುದ್ದಿನ್ ಪೆಂಡಾರಿ ವರದಿ ವಾಚನ ಮಾಡಿದರು. ಮಹಮ್ಮದಖ್ವಾಜಾ ಗೆಸೂದರಾಜ್ ನಿರೂಪಿಸಿದರು. ಅಬೀದ ಮೋಮಿನ್ ವಂದಿಸಿದರು.

Leave a Reply

Your email address will not be published.