ಮಹಾಮೈತ್ರಿಗೆ ಮುನ್ನುಡಿ ಬರೆಯಲು ಮುಂದಾದ್ರಾ ನಾಯಕರು ?


ಬೆಂಗಳೂರು:  ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯೇತರ ಪಕ್ಷಗಳ ಮಹಾಮೈತ್ರಿ ಏರ್ಪಡುತ್ತದೆ ಎಂಬ ವಿಶ್ವಾಸವನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಇಬ್ಬರೂ ಮುಖಂಡರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ದೋಸ್ತಿ ಸರಕಾರಗಳು ಚೆನ್ನಾಗಿ ನಡೆದುಕೊಂಡು ಹೊರಟಿರುವ ಉದಾಹರಣೆಗಳಿವೆ. ದೇಶವನ್ನು , ಪ್ರಜಾಪ್ರಭುತ್ವವನ್ನು ಉಳಿಸಲು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾಗಿರುವುದು ಅನಿವಾರ್ಯ. ಹೀಗಾಗಿ ನಾವೆಲ್ಲ ಒಂದುಗೂಡುವ ಅನಿವಾರ್ಯತೆ ಇದೆ. ಮೈತ್ರಿಕೂಟದ ಮುಂದಿನ ರಣತಂತ್ರದ ಬಗ್ಗೆ ಚರ್ಚಿಸಿದ್ದೇವೆ ಎಂದು ಅವರು ತಿಳಿಸಿದರು.

ಇತರೆ ಸಮಾನ ಮನಸ್ಕ ಪಕ್ಷಗಳೊಂದಿಗೂ ಮಾತುಕತೆ ನಡೆಸಿ ಮಹಾಮೈತ್ರಿಕೂಟಕ್ಕೆ ಒಂದು ಸ್ವರೂಪ ತರಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಇದರಲ್ಲಿ ಪ್ರಮುಖ ಪಕ್ಷವಾಗಿದೆ ಎಂದೂ ಅವರು ಹೇಳಿದರು.

ದೇಶದಲ್ಲಿ ರೈತರೂ ಕೂಡ ಸಂಕಷ್ಟದಲ್ಲಿದ್ದಾರೆ. ನೋಟು ನಿಷೇಧದಿಂದ ಆರ್ಥಿಕ ವ್ಯವಸ್ಥೆ ಕುಂಠಿತವಾಗಿದೆ ಎಂದೂ ನಾಯ್ಡು ಕಳವಳ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಗೌಡರ ನಿವಾಸಕ್ಕೆ ಆಗಮಿಸಿದ ನಾಯ್ಡು ಅವರನ್ನು ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು.

Leave a Reply

Your email address will not be published.