ಮಂಡ್ಯದಲ್ಲಿ ನಿನ್ನೆ ನಡೆದ ಸ್ಪೋಟಕ್ಕೂ ಗಣಿಗಾರಿಕೆಗೂ ಸಂಬಂಧವಿಲ್ಲ: ನಟರಾಜ್


ಪಾಂಡವಪುರ: ಮಂಡ್ಯ ಜಿಲ್ಲಾದ್ಯಂತ ನಿನ್ನೆ ಮಧ್ಯಾಹ್ನ ಕೇಳಿ ಬಂದ ಭಾರಿ ಶಬ್ದಕ್ಕೂ ಮತ್ತು ಕಲ್ಲು ಗಣಿಗಾರಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ತಾಲೂಕು ಕ್ರಶರ್ ಮಾಲೀಕರ ಸಂಘದ ಉಪಾಧ್ಯಕ್ಷ ನಟರಾಜು ಸ್ಪಷ್ಟಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಮಧ್ಯಾಹ್ನ ಸುಮಾರು 3.40ಕ್ಕೆ ಜಿಲ್ಲಾದ್ಯಂತ ಭಾರಿ ಸದ್ದು ಕೇಳಿ ಬಂದ ವಿಚಾರವಾಗಿ ಮಾಧ್ಯಮಗಳಲ್ಲಿ ಭೂಕಂಪ ಅಥವಾ ಗಣಿಗಾರಿಕೆ ಸ್ಪೋಟದಿಂದ ಭಾರಿ ಶಬ್ದ ಬಂದಿದೆ ಎಂದು ವರದಿ ಮಾಡಲಾಗಿದೆ. ಆದರೆ, ಕಳೆದ ಸೆ.25 ರಂದು ಇದೇ ರೀತಿ ಶಬ್ದ ಈ ಭಾಗದಲ್ಲಿ ಕೇಳಿಬಂದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳು ಬೇಬಿ ಬೆಟ್ಟ ಸೇರಿದಂತೆ ತಾಲೂಕಿನಲ್ಲಿ ಎಲ್ಲೂ ಕೂಡ ಕಲ್ಲು ಗಣಿಗಾರಿಕೆ ನಡೆಯದಂತೆ ನಿಷೇಧ ಹೇರಿದ್ದಾರೆ.

ಇದರಿಂದ ಈ ಭಾಗದಲ್ಲಿ ಕ್ರಶರ್ ಬಂದ್ ಮಾಡಲಾಗಿದ್ದು, ಯಾವ ಕ್ವಾರಿಗಳಲ್ಲೂ ಸ್ಪೋಟ ನಡೆದಿಲ್ಲ, ಯಾವುದೋ ಶಬ್ದಕ್ಕೂ ಗಲ್ಲು ಕ್ವಾರಿಗಳಿಗೂ ಥಳುಕು ಹಾಕಿ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟು ಸರಿ, ಜಿಲ್ಲಾಡಳಿತ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವುದರ ಮೂಲಕ ಸಾರ್ವಜನಿಕರ ಊಹಾಪೂಹಗಳಿಗೆ ತೆರೆ ಎಳೆಯಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧಿಕಾರಿಗೆ ಮನವಿ:

ಬೇಬಿ ಬೆಟ್ಟದಲ್ಲಿ ಕಲ್ಲು ಕ್ರಶರ್ ಗಳಿಗೆ ನಿಷೇಧ ಹೇರಿರುವುದರಿಂದ ಈ ಭಾಗದಲ್ಲಿ ಸಾವಿರಾರು ಕೂಲಿ ಕಾರ್ಮಿಕರ ಜೀವನ ನಿರ್ವಹಣೆಗೆ ಅನಾನುಕೂಲ ಉಂಟಾಗಿದ್ದು, ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರು, ಟ್ರಾಕ್ಟರ್ ಚಾಲಕರು, ಟಿಪ್ಪರ್ ಚಾಲಕರು, ಕಲ್ಲು ಹೊಡೆಯುವವರು ಕೆಲಸ ಇಲ್ಲದೆ ಬೀದಿಗೆ ಬಿದ್ದಿದ್ದಾರೆ.

ಜಿಲ್ಲಾಡಳಿತ ಕೂಡಲೇ ಕಾರ್ಮಿಕರ ಮತ್ತು ಪರೋಕ್ಷವಾಗಿ ಇದರಿಂದ ಜೀವನ ನಿರ್ವಹಣೆ ನಡೆಸುತ್ತಿರುವವರ ಆರ್ಥಿಕ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ ಕೂಡಲೇ ಕ್ರಶರ್ ಪ್ರಾರಂಭಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.

ಪಾದಯಾತ್ರೆ :

ಕ್ರಶರ್ ಪ್ರಾರಂಭಕ್ಕೆ ಜಿಲ್ಲಾಡಳಿತ ಕೂಡಲೇ ಅನುಮತಿ ನೀಡಬೇಕು ಇಲ್ಲದಿದ್ದರೆ, ಕಾರ್ಮಿಕರ ಜತೆಗೂಡಿ ಬೇಬಿ ಬೆಟ್ಟದಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ತನಕ ನಾವೂ ಸಹಾ ಪಾದಯಾತ್ರೆ ನಡೆಸಿ ನಮ್ಮ ಅಹವಾಲು ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.

ಕ್ರಶರ್ ಮಾಲಿಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಕೃಷ್ಣೇಗೌಡ (ಕಿಟ್ಟಿ) ಖಜಾಂಚಿ ಎ.ಎಸ್.ರಮೇಶ್, ಕಾರ್ಯದರ್ಶಿ ಸುನೀಲ್ ಕುಮಾರ್, ನಿರ್ದೇಶಕರಾದ ಎಂ.ಸಿ.ನಾಗಣ್ಣ, ಸಿ.ಎಸ್.ಗೋಪಾಲಗೌಡ, ಅಂಕೇಗೌಡ ಮುಂತಾದವರು ಇದ್ದರು.

Leave a Reply

Your email address will not be published.