ಸಹಕಾರಿ ಕ್ಷೇತ್ರ ಬಲವರ್ಧನೆಗೆ ಸರಕಾರ ಬದ್ಧ: ಸಚಿವ ಸಿ.ಎಸ್.ಪುಟ್ಟರಾಜು


ಪಾಂಡವಪುರ: ದೋಸ್ತಿ ಸರಕಾರ ರೈತಪರವಾಗಿದ್ದು, ರೈತರ ಅಗತ್ಯಗಳನ್ನು ಪೂರೈಸಲು ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿನನಿತ್ಯ ಶ್ರಮಿಸುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ಟಿಎಪಿಸಿಎಂಎಸ್ ಮತ್ತು ತಾಲ್ಲೂಕಿನ ಎಲ್ಲ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ ತಾಂತ್ರಿಕತೆ ವೃದ್ಧಿಪಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದ ರೈತರ ಸಾಲ ಮನ್ನಾ ಮಾಡಲಾಗಿದೆ. ರೈತರ ಅಭ್ಯುದಯಕ್ಕೆ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಮತ್ತು ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ನೈಪುಣ್ಯತೆ ಸಾಧಿಸುವ ಕೆಲಸ ಆಗಬೇಕಿದ್ದು ಸರ್ಕಾರ ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯೋನ್ಮುಖವಾಗಿದೆ ಎಂದರು.ಕೆಐಸಿಎಂ ಸಂಸ್ಥೆಯ ಉಪನ್ಯಾಸಕ ಎಸ್.ಮಹದೇವಪ್ಪ ತಾಂತ್ರಿಕ ಕೌಶಲ್ಯದ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಉತ್ತಮ ಸಹಕಾರ ಸಂಘಗಳ ಪದಾಧಿಕಾರಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷರೂ ಹಾಗೂ ಪಾಂಡವಪುರ ತಾಲೂಕು ಪಂಚಾಯಿತಿ  ಸದಸ್ಯ ವಿ.ಎಸ್.ನಿಂಗೇಗೌಡ, ಜಿ.ಪಂ.ಸದಸ್ಯೆ ಶಾಂತಲಾ ರಾಮಕೃಷ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಾಂತರಾಜು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಅಶ್ವಥ್ ಇತರರು ಇದ್ದರು.

Leave a Reply

Your email address will not be published.