ತೇಲುವ ವೇದಿಕೆ ಮೇಲೆ ತೊಣ್ಣೂರು ಉತ್ಸವ : ಸಚಿವ ಪುಟ್ಟರಾಜು


ಪಾಂಡವಪುರ: ತಾಲೂಕಿನ ಐತಿಹಾಸಿಕ ತೊಣ್ಣೂರು ಕೆರೆಯ ಮೇಲೆ ಇದೇ ಮೊದಲ ಬಾರಿಗೆ ನಿರ್ಮಿಸಿರುವ ಬೃಹತ್ ತೇಲುವ ವೇದಿಕೆಯ ಮೇಲೆ ತೊಣ್ಣೂರು ಉತ್ಸವದ ಸಾಂಸ್ಕೃಕ ಕಾರ್ಯಕ್ರಮ ನಡೆಸಲಾಗುವುದು ಎಂದು ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತೊಣ್ಣೂರು ಗ್ರಾಮದ ಕೆರೆಯ ಬಳಿ ಬುಧವಾರ  ನಡೆದ ಐತಿಹಾಸಿಕ ತೊಣ್ಣೂರು ಕೆರೆ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತೊಣ್ಣೂರು ಕೆರೆ ಈ ಭಾಗದ ರೈತರ ಜೀವನಾಡಿಯಾಗಿದೆ.  ಪ್ರತಿ ವರ್ಷ ತುಂಬಿದ ಕೆರೆಗೆ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸುವುದು ವಾಡಿಕೆ, ಈ ಬಾರಿ ಈ ಐತಿಹಾಸಿಕ ಕೆರೆಗೆ ಬಾಗೀನ ಅರ್ಪಿಸಲು ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುವ ಕಾರಣ ಇಲ್ಲಿ ಬೃಹತ್ ಉತ್ಸವ ನಡೆಸುವುದರ ಮೂಲಕ ಈ ಸ್ಥಳಕ್ಕೆ ಸಾಂಸ್ಕೃತಿಕ  ಸ್ಪರ್ಷ ನೀಡಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಮೂರು ದಿನ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೇಶದ ಪ್ರಮುಖ ಸಾಂಸ್ಕೃತಿಕ ಕಲಾವಿದರು ಆಗಮಿಸಲಿದ್ದಾರೆ. ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ, ಉಚಿತ ಬೋಟಿಂಗ್ ವ್ಯವಸ್ಥೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಏರ್ಪಡಿಸಲಾಗಿದೆ, ಜತೆಗೆ ಆಹಾರ ಮೇಳ ನಡೆಸಿ ಕಡಿಮೆ ಹಣದಲ್ಲಿ ಉತ್ತಮ ಆಹಾರವನ್ನು ಪ್ರವಾಸಿಗರಿಗೆ ನೀಡಲಾಗುವುದು ಎಂದರು.

718 ಕೋಟಿ ವೆಚ್ಚದಲ್ಲಿ ಪಾಂಡವಪುರ ತಾಲ್ಲೂಕು ಅಭಿವೃದ್ಧಿ ಸುಮಾರು 718 ಕೋಟಿ ರೂಪಾಯಿ ವೆಚ್ಚದಲ್ಲಿ ಪಾಂಡವಪುರ ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು ಎಂದ ಸಚಿವರು, ನ.23 ರಂದು ತಾಲ್ಲೂಕಿನ ಜಕ್ಕನಹಳ್ಳಿ, ಎಲೆಕೆರೆ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡುವರು, ಜತೆಗೆ ಪಾಂಡವಪುರ ಬಸ್ ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಹಾಗೂ ಬಸ್ ಡಿಪೋ ಕಾಂಕ್ರಿಟ್ ಕಾಮಗಾರಿಗೂ ಚಾಲನೆ ನೀಡುತ್ತಾರೆ, ಅಲ್ಲದೇ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಮೇಲುಕೋಟೆಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ವಿವರಣೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ವಿವಿಧ ಇಲಾಖೆಯ ಮುಖ್ಯಸ್ಥರು ಸಚಿವರೊಂದಿಗೆ ಕಾರ್ಯಕ್ರಮದ ಸಿದ್ದತೆಯ ಪರಿಶೀಲನೆ ನಡೆಸಿದರು. ಜಿ.ಪಂ.ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಶಾಂತಲಾ ರಾಮಕೃಷ್ಣ ಮುಂತಾದವರು ಇದ್ದರು.

 

Leave a Reply

Your email address will not be published.