ಗಣಿಗಾರಿಕೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಇಂಜಿನೀಯರ್ ನಟರಾಜ್


• ನಕಲಿ ಹೋರಾಟಗಾರರಿಂದ ಗಣಿ ಕಾರ್ಮಿಕರು ಸಂಕಷ್ಟಕ್ಕೆ

ಪಾಂಡವಪುರ : ತಾಲೂಕಿನ ಬೇಬಿ ಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ರೈತರ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಯಾವುದೇ ರೀತಿಯ ಅಪಾಯವಿಲ್ಲದಿದ್ದರೂ ಗಣಿಗಾರಿಕೆ ವಿರುದ್ಧ ನಕಲಿ ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆಗಳಿಂದ ಗಣಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದು ತಾಲೂಕು ಕ್ರಶರ್ ಮಾಲೀಕರ ಸಂಘದ ಉಪಾಧ್ಯಕ್ಷ, ಇಂಜಿನೀಯರ್ ನಟರಾಜ್ ಹೇಳಿದರು.

ತಾಲೂಕಿನ ಬೇಬಿ ಬೆಟ್ಟದ ಬಳಿಯ ರಾಮಯೋಗೀಶ್ವರ ಮಠದ ಆವರಣದಲ್ಲಿ ಸೋಮವಾರ ನಡೆದ ಕ್ರಶರ್ ಮಾಲೀಕರು, ಕಲ್ಲು ಕ್ವಾರಿ ಮಾಲೀಕರು ಹಾಗೂ ಗಣಿ ಕಾರ್ಮಿಕರು ನಡೆಸಿದ ಕುಂದುಕೊರತೆಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

2009 ರಲ್ಲಿಯೇ ಕೋಲಾರದಲ್ಲಿರುವ ಸೆಂಟ್ರಲ್ ಮೈನ್ಸ್ ಅಂಡ್ ಜಿಯಾಲಜಿ ಇಲಾಖೆಯು ನಡೆಸಿದ ಅಧ್ಯಯನದ ಪ್ರಕಾರ ಇಲ್ಲಿ ನಡೆಯವ ಗಣಿಗಾರಿಕೆಯಿಂದ ಕೇವಲ 600 ರಿಂದ 900 ಮೀಟರ್ ಅಂತರದ ಪ್ರದೇಶಕ್ಕೆ ಮಾತ್ರ ಹಾನಿಯಾಗಬಲ್ಲದು, ಕೆಆರ್‍ಎಸ್ ಜಲಾಶಲ ಇಲ್ಲಿಂದ 8 ಕಿಮೀ ದೂರದಲ್ಲಿರುವುದರಿಂದ ಯಾವುದೇ ಅಪಾಯವಿಲ್ಲ ಎಂದು ವರದಿ ನೀಡಿದ್ದಾರೆ, ಆದಾಗ್ಯೂ ಕೆಲವು ನಕಲಿ ಹೋರಾಟಗಾರರು ಗಣಿಗಾರಿಕೆಯಿಂದ ಜಲಾಶಯಕ್ಕೆ ಅಪಾಯವಿದೆ ಎಂಬ ಸುಳ್ಳು ಸುದ್ದಿಯನ್ನು ನಿರಂತರವಾಗಿ ಹಬ್ಬಿಸಿ ಜನರನ್ನು ದಾರಿತಪ್ಪಿಸುವುದ ಮೂಲಕ ಸಾವಿರಾರು ಕಲ್ಲುಗಣಿ ಕಾರ್ಮಿಕರನ್ನು ಸಂಕಷ್ಟಕ್ಕೆ ಈಡುಮಾಡಿದ್ದಾರೆ ಎಂದು ದೂರಿದರು.

ಸುಮಾರು 60 ವರ್ಷದಿಂದ ಇಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ, ಹೇಮಾವತಿ ನಾಲೆ ಇಲ್ಲಿ ಬರುವುದಕ್ಕೂ ಮುನ್ನ ಈ ಭಾಗದ ಜಮೀನಿನಲ್ಲಿ ಹುರುಳಿಯೂ ಬೆಳೆಯಲಾಗುತ್ತಿರಲಿಲ್ಲ, ಈ ಸಂದರ್ಭದಲ್ಲಿ ಇಲ್ಲಿನ ರೈತರು ಕಲ್ಲು ಗಣಿಗಾರಿಕೆಯಮ್ಮೆ ತಮ್ಮ ಉಪ ಕಸುಬನ್ನಾಗಿ ಮಾಡಿಕೊಂಡು ಅದರಲ್ಲಿ ಬದುಕು ಕಟ್ಟಿಕೊಂಡಿದ್ದಾರೆ, ಈಗ ಇದ್ದಕ್ಕಿಂದ್ದಂತೆ ಜಲಾಶಯಕ್ಕೆ ಅಪಾಯ ಎಂಬ ವಿಚಾರ ಮುಂದಿಟ್ಟುಕೊಂಡು ಗಣಿಗಾರಿಕೆಗೆ ನಿಷೇಧ ಹೇರಿ ಇದನ್ನೆ ನಂಬಿದವರ ಬದುಕನ್ನು ಹಾಳು ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕೆಆರ್ ಎಸ್ ಜಲಾಶಯ ತಾಂತ್ರಿಕವಾಗಿ ಗ್ರಾವಿಟಿ ಡ್ಯಾಂ ಆಗಿದ್ದು, ಇದರ ನಿರ್ಮಾಣಕ್ಕೆ ಕಬ್ಬಿಣ, ಸಿಮೆಂಟ್, ಹೆಚ್ಚು ಬಳಕೆಯಾಗಿಲ್ಲ ಇದರಿಂದ 8 ಕಿಮೀ ದೂರದ ಗಣಿಗಾರಿಯ ಬ್ಲಾಸ್ಟ್‍ನಿಂದ ಇದಕ್ಕೆ ಸ್ವಲ್ಪವೂ ಅಪಾಯವಿಲ್ಲ, ಡ್ಯಾಂ ಪಕ್ಕದಲ್ಲೆ ಇರುವ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಸುಮಾರು 160 ಅಡಿ ಆಳಕ್ಕೆ ಬ್ಲಾಸ್ಟ್ ನಡೆಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಇದೇ ಮಾದರಿಯ ಇನ್ನೂ 2 ಪವರ್ ಪ್ಲಾಂಟ್ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿಯನ್ನೂ ನೀಡಿದೆ, ಅಲ್ಲದೇ ವರುಣ ನಾಲೆ ನಿರ್ಮಾದ ವೇಳೆ 15 ಅಡಿ ಅಗಲ ಮತ್ತು ಒಂದು ಕಿಮೀ ಉದ್ದದ ನಾಲೆಯನ್ನು ಡ್ಯಾಂ ಒಳಗೆ ಬ್ಲಾಸ್ಟ್ ನಡೆಸಿ ನಿರ್ಮಿಸಲಾಗಿದೆ ವಾಸ್ತವ ಸ್ಥಿತಿ ಹೀಗಿರುವವಾಗ ಕೇವಲ ಸಚಿವ ಸಿ.ಎಸ್.ಪುಟ್ಟರಾಜು ಅವರ ಕುಟುಂಬವನ್ನು ಇಲ್ಲಿನ ಗಣಿಗಾರಿಕೆಗೆ ಸಮೀಕರಿಸಿ ಅವರನ್ನು ತೇಜೋವಧೆ ಮಾಡುವ ಕೆಲಸದಲ್ಲಿ ಕೆಲವರು ನಿರತರಾಗಿದ್ದು, ಇದರಿಂದ ಈ ವೃತ್ತಿಯಲ್ಲಿ ಬದುಕು ಕಂಡುಕೊಂಡಿರುವ ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳಲಾಗಿದೆ ಎಂದು ದೂರಿದರು.

ಗಣಿಗಾರಿಕೆಯಿಂದ ಶೇ90 ರಷ್ಟು ಅನುಕೂಲ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಗಲಿದೆ, ಉಳಿದಂತೆ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಕೇವಲ ಶೇ10 ರಷ್ಟು ಅನುಕೂಲವಾಗಲಿದ್ದು, ಗಣಿಗಾರಿಕೆ ನಿಷೇಧದಿಂದ ಇವೆರಡೂ ಕೆಲಸಗಳು ಸ್ಥಗಿತಗೊಂಡು ಕೂಲಿ ಕಾರ್ಮಿಕರು, ಲಾರಿ ಮಾಲಿಕರು, ಟ್ರಾಕ್ಟರ್ ಮಾಲಿಕರು, ಕಲ್ಲು ಹೊಡೆಯುವವರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಮುಂದೆ ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸುದ್ದಿಗಳ ಜತೆ ಕೂಲಿ ಕಾರ್ಮಿಕರ ಆತ್ಮಹತ್ಯೆಗಳ ಸುದ್ದಿಗಳೂ ಕೇಳಬಹುದಾದ ಸಂದರ್ಭ ಸೃಷ್ಠಿಯಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಸರ್ಕಾರ ಕೂಡಲೇ ಉನ್ನತ ಮಟ್ಟದ ತಂತ್ರಜ್ನರನ್ನು ನೇಮಿಸಿ ಇಲ್ಲಿನ ಗಣಿಗಾರಿಕೆಯಿಂದ ಜಲಾಶಯಕ್ಕೆ ನಿಜವಾಗಿಯೂ ಅಪಾಯವಿದೆಯಾ ಅಥವಾ ಇಲ್ಲವಾ ಎಂಬ ವಿಚಾರವನ್ನು ಸ್ಪಷ್ಟಪಡಿಸಿ ಜನತೆಯ ಮುಂದಿಡಬೇಕು ಎಂದು ಅವರು ಕೋರಿದರು.
ಲೋಕಲ್ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕೆಲವು ನಕಲಿ ಹೋರಾಟಗಾರರು ಮಾಧ್ಯಮವನ್ನು ಬಳಸಿಕೊಂಡು ಗಣಿಗಾರಿಕೆಯಿಂದ ಕೆಆರ್‍ಎಸ್ ಜಲಾಶಯಕ್ಕೆ ಅಪಾಯವಿದೆ ಎಂದು ನಿರಂತರವಾಗಿ ಬಿಂಬಿಸಿ ಜನರನ್ನು ವಂಚಿಸುತ್ತಿದ್ದಾರೆ. ಸರ್ಕಾರ ಕೂಡಲೇ ಉನ್ನತಮಟ್ಟದ ತಾಂತ್ರಿಕ ಸಮಿತಿಯನ್ನು ರಚಿಸಿ ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜಲಾಶಯಕ್ಕೆ ನಿಜವಾಗಿಯೂ ಅಪಾಯವಿದೆಯಾ ಅಥವಾ ಇದು ಸುಳ್ಳು ಸುದ್ದಿಯಾ ಎಂಬುದನ್ನು ಜನತೆಯ ಮುಂದೆ ಸ್ಪಷ್ಟಪಡಿಸಬೇಕು ಇಲ್ಲದಿದ್ದರೆ ಗಣಿ ಕಾರ್ಮಿಕರ ಬದುಕುವ ಹಕ್ಕಿನ ಸಂರಕ್ಷಣೆಗಾಗಿ ನಾವೂ ಸಹಾ ನಿರಂತರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ತಾಲೂಕು ಪಂಚಾಯ್ತಿ ಸದಸ್ಯ ಗೋಪಾಲಗೌಡ, ಕ್ರಶರ್ ಮಾಲಿಕರ ಸಂಘದ ಕೃಷ್ಣೇಗೌಡ, ನಾಗಣ್ಣ, ಜಯರಾಮು, ರಮೇಶ್ ಮುಂತಾದವರು ಇದ್ದರು.

Leave a Reply

Your email address will not be published.