ಮಕ್ಕಳ ಶಿಕ್ಷಣಕ್ಕೆ ಒತ್ತು: ವಾಲ್ಮೀಕಿ ಸಮುದಾಯಕ್ಕೆ ಸತೀಶ ಜಾರಕಿಹೊಳಿ ಕಿವಿಮಾತು


ಗಜೇಂದ್ರಗಡ : ವಾಲ್ಮೀಕಿ ಸಮುದಾಯದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಸಲಹೆ ಮಾಡಿದ್ದಾರೆ.

ತಾಲೂಕಿನ ನರೇಗಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯಲ್ಲಿರುವ ಸುಶಿಕ್ಷಿತ ಯುವಜನರು ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪ್ರೇರಣೆ ನೀಡಬೇಕು ಎಂದು ಮನವಿ ಮಾಡಿದರು.

ಅಕ್ಷರಾಭ್ಯಾಸ ಮತ್ತು ಜ್ಞಾನ ಸಂಪಾದನೆಯಿಂದ ಏನು ಲಾಭವಾಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಲಾರದಂತೆ ಕಾಳಜಿ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಲಿತವರಿಗೆ ಸರಕಾರದಿಂದ ಸಾಕಷ್ಟು ಸೌಲಭ್ಯಗಳು ಕಾದು ಕುಳಿತಿವೆ. ಕಲಿತ ಮಾತ್ರಕ್ಕೆ ಸರಕಾರಿ ನೌಕರಿಯನ್ನೇ ಮಾಡಬೇಕು ಎಂದೇನಿಲ್ಲ. ಖಾಸಗಿ ಕ್ಷೇತ್ರದಲ್ಲಿಯೂ ಉದ್ಯೋಗಾವಕಾಶಗಳಿದ್ದು, ಕೃಷಿ, ಸ್ವಯಂ ಉದ್ಯೋಗಗಳಿಗೂ ಸಾಕಷ್ಟು ಪ್ರೋತ್ಸಾಹವಿದೆ. ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಸರಕಾರದ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳಿದ್ದು, ಅಲ್ಲಿ 3, 6, 9 ತಿಂಗಳ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿಗೆ ಅವಕಾಶವಿರುತ್ತದೆ. ಸಮುದಾಯದ ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಿದ್ಯಾವಂತರಿಗೆ ವಿದೇಶಗಳಲ್ಲಿಯೂ ಉದ್ಯೋಗಾವಕಾಶಗಳು ಲಭ್ಯವಿದ್ದು, ಈ ಕುರಿತಂತೆ ಜಾಗೃತಿ ಮೂಡಿಸಲು ಯುವಜನರು ಪ್ರಯತ್ನಿಸಬೇಕು ಎಂದರು.

ವಾಲ್ಮೀಕಿ, ಬಸವಣ್ಣ, ಕನಕದಾಸ , ಅಂಬೇಡ್ಕರ ಯಾರದ್ದೇ ಇರಲಿ, ಜಯಂತಿಗಳನ್ನು ಆಚರಿಸುವಾಗ ಮೆರವಣಿಗೆಗೆ ಹೆಚ್ಚು ಸಮಯ ಮೀಸಲು ಮಾಡುವುದು ಬೇಡ.  ಜಯಂತಿ ನೆಪದಲ್ಲಿ ವಿದ್ವಾಂಸರನ್ನು ಕರೆಯಿಸಿ ಇತಿಹಾಸವನ್ನು ತಿಳಿದುಕೊಳ್ಳಲು ಹೆಚ್ಚು ಸಮಯ ಮೀಸಲಿಡಬೇಕು. ಇತಿಹಾಸವನ್ನು ತಿಳಿದುಕೊಂಡವರು ಮಾತ್ರ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿದೆ. ಹೀಗಾಗಿ ಜಯಂತಿಗಳ ಮೂಲಕ ಜ್ಞಾನ ಸಂಪಾದನೆಗೆ ಒತ್ತು ನೀಡಬೇಕು ಎಂದೂ ಅವರು ಹೇಳಿದರು.

ಹನುಮಣ್ಣ, ಮಹೇಶ, ಶ್ರೀಶೈಲ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು , ಇತರೆ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.