ಟಿಪ್ಪು  ಕಾಲದಲ್ಲಿ ಕನ್ನಡಿಗರ ಬದುಕು ಗೌರವಯುತವಾಗಿತ್ತು:ಪತ್ರಕರ್ತ ಬಿಳಿದಾಳೆ ಪಾರ್ವತೀಶ್


ಪಾಂಡವಪುರ : ಕರ್ನಾಟಕದ ಹೆಮ್ಮೆಯ ಕಲಿ, ಧೀರೋತ್ತಾರ ಪುರುಷ ಮೈಸೂರು ಹುಲಿ ಬಿರುದಾಂಕಿತ ಟಿಪ್ಪು  ಸುಲ್ತಾನ್ ಕಾಲದಲ್ಲಿ ಕನ್ನಡಿಗರ ಬದುಕು ಘನತೆ ಮತ್ತು ಗೌರವದಿಂದ ಕೂಡಿತ್ತು ಎಂದು ಪತ್ರಕರ್ತ ಬಿಳಿದಾಳೆ ಪಾರ್ವತೀಶ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಟಿಪ್ಪು ಆಡಳಿತದಲ್ಲಿ ಮೈಸೂರು ರಾಜ್ಯ ಕೈಗಾರಿಕ ಕ್ರಾಂತಿ ನಡೆಸಿತ್ತು, ದೇಶ ವಿದೇಶಗಳಿಗೆ ಇಲ್ಲಿನ ಸಕ್ಕರೆ, ರೇಷ್ಮೆ ಬಟ್ಟೆ, ಉಕ್ಕು ಸೇರಿದಂತೆ ವಿವಿಧ ಉತ್ಪನ್ನಗಳು ರಫ್ತಾಗುತ್ತಿದ್ದವು, ಅಲ್ಲದೇ ಇಲ್ಲಿನ ಉಕ್ಕು, ಸಕ್ಕರೆ, ರೇಷ್ಮೆ ಬಟ್ಟೆಗಳು ಉತ್ಕøಷ್ಟವಾಗಿದ್ದವು ಎಂದು ವಿದೇಶಿಗರೇ ಹೊಗಳಿದ್ದಾರೆ ಎಂದರು.

ಟೀಪೂ ಆಡಳಿತ ವ್ಯಾಪ್ತಿಯಲ್ಲಿದ್ದ ಪ್ರತಿಯೊಂದು ಕುಟುಂಬವೂ ಖಚಿತ ಆದಾಯ ಬರುವಂತಹ ಉದ್ಯಮದಲ್ಲಿ ತೊಡಗಿದ್ದುದು ವಿಶೇಷವಾಗಿತ್ತು. ಇದರಿಂದ ಟೀಪೂ ಪ್ರಜೆಗಳು ಸಂತೋಷದಿಂದ ಮತ್ತು ಗೌರವಯುತವಾಗಿ ಬದುಕುತ್ತಿದ್ದರು ಎಂದರು.
ಟೀಪೂ ಆಡಳಿತದಲ್ಲಿ 33ಸಾವಿರ ಕೆರೆಗಳು, 30ಲಕ್ಷ ಹೆಕ್ಟೆರ್ ವ್ಯವಸಾಯದ ಭೂಮಿ, ಮೂರು ಲಕ್ಷ ನೇಗಿಲುಗಳು ಇದ್ದವು, 80 ಸಾವಿರ ಜನ ವಸ್ತ್ರೋದ್ಯಮದಲ್ಲಿ ನಿರತರಾಗಿದ್ದರು, 1ಲಕ್ಷ ಜನ ಕುಶಲಕರ್ಮಿಗಳು ಅನೇಕ ಉದ್ಯಮದಲ್ಲಿ ತೊಡಗಿದ್ದರು. ಟೀಪೂ ಕಾಲದಲ್ಲಿ ಕೃಷಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿತ್ತು. ಜತೆಗೆ ಕೈಗಾರಿಕಾ ಕ್ರಾಂತಿಯೂ ನಡೆದಿತ್ತು ಎಂದರು.

ಟೀಪೂ ಕುರಿತು ಜನರು ರಚಿಸಿರುವ ಲಾವಣಿಗಳೇ ಆತನ ಆಡಳಿತಕ್ಕೆ ಸಾಕ್ಷಿಯಾಗಿವೆ, ಟೀಪೂ ಅತ್ಯಂತ ಮೇಧಾವಿ, ಆತ್ಮಾಭಿಮಾನ ಉಳ್ಳ ರಾಜನಾಗಿದ್ದನು, ಇಡೀ ಪ್ರಪಂಚವೇ ಬ್ರಿಟೀಷರ ಅಧೀನದಲ್ಲಿದ್ದ ಕಾಲದಲ್ಲಿ ಅವರ ಬೃಹತ್ ಸೈನ್ಯವನ್ನು ಚಾಣಾಕ್ಷತನದಿಂದ ಎದುರಿಸಿ ಅವರ ವಿರುದ್ಧ ನಾಲ್ಕು ಯುದ್ಧಗಳನ್ನು ಮಾಡಿದ ಹೆಮ್ಮೆ ಟೀಪ್ಪುವಿನದು. ಟೀಪುವನ್ನು ಪ್ರಜೆಗಳು ಅಪಾರವಾಗಿ ಪ್ರೀತಿಸುತ್ತಿದ್ದರು, ಯುದ್ಧಕಾಲದಲ್ಲಿ ಸಾಮಾನ್ಯ ಪ್ರಜೆಗಳೂ ಬ್ರಿಟೀಷರ ವಿರುದ್ಧ ಯುದ್ಧ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.
ಮೂರನೇ ಮೈಸೂರು ಯುದ್ಧದಲ್ಲಿ ಟೀಪೂ ಬ್ರಿಟೀಷರ ವಿರುದ್ಧ ಸೋಲು ಅನುಭವಿಸಿದಾಗ ಮೂರು ಕೋಟಿ ಪಗೋಡ ಆದಾಯದ ತನ್ನ ಅರ್ಧ ರಾಜ್ಯವನ್ನು ಬ್ರಿಟೀಷರಿಗೆ ಬಿಟ್ಟು ಕೊಟ್ಟಿದ್ದಲ್ಲದೇ ತನ್ನ ಎರಡು ಮಕ್ಕಳನ್ನು ಗಿರಿವಿ ಇಟ್ಟಿದ್ದನು. ಇದರಿಂದ ನಮಗೆ ಟೀಪೂ ರಾಜ್ಯದ ವಾರ್ಷಿಕ ಆದಾಯ ಸುಮಾರು ಆರು ಕೋಟಿ ಇತ್ತು ಎಂದು ತಿಳಿಯುತ್ತದೆ ಎಂದರು.
ಕೇವಲ ರಾಜಕೀಯ ಕಾರಣಗಳಿಗೆ ಟೀಪೂ ವಿರುದ್ಧ ಮಾತನಾಡುವುದು ಇತಿಹಾಸಕ್ಕೆ ಮಸಿ ಬಳಿದಂತಾಗುತ್ತದೆ ಟೀಪೂವಿನ ಆಡಳಿತ ಮತ್ತೆ ಮರುಕಳಿಸಿದಾಗ ಮಾತ್ರ ಜನ ಸಾಮಾನ್ಯರ ಬದುಕು ಹಸನಾಗಲು ಸಾಧ್ಯ ಎಂದರು.
ಪತ್ರಕರ್ತ ಚೀರನಹಳ್ಳಿ ಲಕ್ಷ್ಮಣ ಮಾತನಾಡಿ, ಟೀಪೂ ಕಂಡ ಕನಸುಗಳನ್ನು ನನಸು ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ ಎಂದರು.

ತಹಸಿಲ್ದಾರ್ ಡಿ.ಹನುಮಂತರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ.ಸದಸ್ಯ ಅಶೋಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಸ್ಲಿಂ ಮುಖಂಡರಾದ ಮೊಹಮ್ಮದ್ ಹನೀಫ್, ಏಜಾಸ್ ಅಲಿಖಾನ್, ನಜೀರ್ ಅಹಮದ್, ಸಮಿಯುಲ್ಲಾ, ಮೊಹಮ್ಮದ್ ಗೌಸ್, ಮುಜಾಹಿದ್ ಪಾಷ, ತಾ.ಪಂ.ಸದಸ್ಯರಾದ ನಿಂಗೇಗೌಡ, ಶಿವಣ್ಣ, ಗಾಯಿತ್ರಿ, ರಾಧಮ್ಮ ಸೇರಿದಂತೆ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದರು.

Leave a Reply

Your email address will not be published.