ಸ್ಮಶಾನದಲ್ಲಿ ಸಂಭ್ರಮಾಚರಣೆಗೆ ಕ್ಷಣಗಣನೆ….!


ಬೆಳಗಾವಿ: ಸ್ಮಶಾನದಲ್ಲಿ ಸಂಭ್ರಮ ….! ಶೀರ್ಷಿಕೆ ನೋಡಿ ಗಾಬರಿ ಬಿದ್ದಿರಾ? ಯಾರಪ್ಪಾ ಈ ಭೂಪರು ಸ್ಮಶಾನದಲ್ಲಿ ಸಂಭ್ರಮ ಪಡುವವರು ಎಂದುಕೊಂಡಿರಾ? ಯಾಕಿವರಿಗೆ ಇಂತಹ ವಿಕೃತ ಮನೋಭಾವ ? ಎಂದೂ ಪ್ರಶ್ನಿಸಿಕೊಳ್ಳುತ್ತಿದ್ದೀರಾ?

ಖಂಡಿತವಾಗಿಯೂ ನಿಮ್ಮ ಪ್ರಶ್ನೆ ಸಹಜ. ಆದರೆ, ಸ್ಮಶಾನದಲ್ಲಿ ಸಂಭ್ರಮ ಪಡುತ್ತಿರುವುದಕ್ಕೆ ಇಲ್ಲಿ ನೈಜ ಕಾರಣವಿದೆ. ಹೌದು, ಇಲ್ಲಿಯ ಸದಾಶಿವನಗರದ ಬುದ್ಧ , ಬಸವ, ಅಂಬೇಡ್ಕರ್ ಶಾಂತಿಧಾಮ (ಸ್ಮಶಾನ)ದಲ್ಲಿ ಇಂದು ಇಡೀ ದಿನ ಸಂಭ್ರಮವೋ ಸಂಭ್ರಮ !

ರಾಜ್ಯಾದ್ಯಂತ ಜನ ಸಮುದಾಯದಲ್ಲಿ ವೈಚಾರಿಕ ಜಾಗೃತಿ ಹಾಗೂ ಸ್ವಾಭಿಮಾನ ಮೂಡಿಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಶಾಸಕ ಸತೀಶ ಜಾರಕಿಹೊಳಿ ಸಂಸ್ಥಾಪನೆ ಮಾಡಿರುವ ಮಾನವ ಬಂಧುತ್ವ ವೇದಿಕೆಯು  ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಮೌಢ್ಯ ವಿರೋಧಿ ಪರಿವರ್ತನಾ ದಿನ ಆಚರಣೆ ಹಮ್ಮಿಕೊಂಡಿರುವುದೇ ಆ ಸಂಭ್ರಮಕ್ಕೆ ಕಾರಣ.

2014 ರ ಡಿಸೆಂಬರ್ 6 ರಂದು ಆರಂಭವಾದ ಈ ವಿಶಿಷ್ಟ ಕಾರ್ಯಕ್ರಮ ಈ ಸಲ ಐದನೇ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯದ 30 ಜಿಲ್ಲೆಗಳು ಮಾತ್ರವಲ್ಲದೇ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ನೆರೆ ರಾಜ್ಯಗಳಿಂದಲೂ ಸಾವಿರಾರು ಜನರು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಉದ್ಘಾಟಿಸುವರು. ಬಸವಧರ್ಮ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದದೇವರು, ಕಲಬುರಗಿಯ ವಿಶ್ವನಾಥ ಕೊರಣೇಶ್ವರ ಅಪ್ಪಾ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ  ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಚಿಂತಕ , ನಾಡೋಜ ಬರಗೂರು ರಾಮಚಂದ್ರಪ್ಪ ಪ್ರಧಾನ ಭಾಷಣ ಮಾಡುವರು.

ಪ್ರೊ. ವಸಂತ ಹಂಕಾರೆ. ಡಾ. ಮೀನಾಕ್ಷಿ ಬಾಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನ ನಂತರದ ಅವಧಿಯಲ್ಲಿ ತತ್ವಪದ, ಭಜನೆ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುವವು. ಪ್ರತಿವರ್ಷದಂತೆ ಅಹೋರಾತ್ರಿ ಕಾರ್ಯಕ್ರಮ (24 ಗಂಟೆ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಮಶಾನದಲ್ಲಿಯೇ ಊಟ, ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಯಾವ ಮದುವೆ ಸಮಾರಂಭಕ್ಕೂ ಕಮ್ಮಿಯಿಲ್ಲದಂತಹ ಭವ್ಯ ಮಂಟಪ, ಅಡುಗೆ ಕೋಣೆ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಭೋಜನಾಲಯ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಜತೆಗೆ ಹೋಗಿ ಬರಲು ವಾಹನಗಳ ವ್ಯವಸ್ಥೆಯನ್ನೂ ಅಚ್ಚು ಕಟ್ಟಾಗಿ ಮಾಡಲಾಗಿದೆ.

ಊಟ -ಉಪಾಹಾರಕ್ಕೆ ನಾನಾ ಭಕ್ಷ್ಯಗಳು ಸಿದ್ಧಗೊಂಡಿವೆ. ಬನ್ನಿ , ಎಲ್ಲರೂ ಮೌಢ್ಯತೆಯ ವಿರುದ್ಧ ಸೆಡ್ಡು ಹೊಡೆಯೋಣ !

Leave a Reply

Your email address will not be published.