ಸ್ವಾಭಿಮಾನದ ಪ್ರತೀಕ ಭೀಮಾ ಕೋರೆಗಾಂವ ವಿಜಯೋತ್ಸವ.!


ಭೀಮಾ ಕೋರೆಗಾಂವ ವಿಜಯೋತ್ಸವದ 201 ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಈ ಲೇಖನ…

“ಇತಿಹಾಸವೆನ್ನುವುದು ಮುಳುಗಿಹೋದ ಹಡಗಿನ ತೇಲುತ್ತಿರುವ ಹಲಗೆಗಳು, ತೆಲುವ ಹಲಗೆಗಳಿಂದ ಹಡಗನ್ನು ಮರು ಕಲ್ಪಿಸಿಕೊಳ್ಳುವುದೇ ಇತಿಹಾಸಕಾರನ ಜವಾಬ್ದಾರಿಯಾಗಿದೆ. ಆದರೆ ಚರಿತ್ರೆಕಾರರು ಎಷ್ಟೋಸಾರಿ ಪ್ರಜ್ಞಾಪೂರ್ವಕವಾಗಿ ಕೆಲವು ಹಲಗೆಗಳನ್ನು ನಿರ್ಲಕ್ಷಿಸುವುದುಂಟು, ಅದು ಹಡಗಿನ ರೂಪ ಆಕಾರ ಗುಣ ಬದಲಿಸಿಬಿಡಬಲ್ಲಂಥ ನಿರ್ಣಾಯಕ ಹಲಗೆಯಾಗಿದ್ದರೆ ಆಗ ಚರಿತ್ರೆಯನ್ನುವುದು ಏಕಮುಖಿ ವಿವರಗಳ ಕಟ್ಟುಕತೆಯಾಗಿಬಿಡುತ್ತದೆ ಈ ಅಪಾಯದಿಂದ ಪಾರಾಗಬೇಕೆಂದರೆ ಬದ್ಧತೆ ಹಾಗೂ ಪಕ್ಷಕಾತವಿಲ್ಲದ ಪಾರದರ್ಶಕ ಮನಸು ಅಗತ್ಯವಾಗಿದೆ.”

“ಭಾರತದ ಇತಿಹಾಸದಲ್ಲಿ ಅನೇಕ ಘೋರ ಯುದ್ದಗಳು ತಮ್ಮ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಮತ್ತು ಆಡಳಿತಕ್ಕಾಗಿ ಕೆಲವು ರಾಜ ಮಹಾರಾಜರುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಯುದ್ದಗಳನ್ನು ಮಾಡಿದ್ದಾರೆ. ಇಂತಹ ಅನೇಕ ಯುದ್ದಗಳಲ್ಲಿ ಕ್ರಿಶ 1818 ಜನೆವರಿ 1 ರಂದು ನಡೆದ ಯುದ್ದ ಸಾಮಾನ್ಯವಾಗಿರಲಿಲ್ಲ ಈ ಹೋರಾಟ ಅವರ ಸ್ವಾಭಿಮಾನದ ಬದುಕಿಗಾಗಿ ನಡೆದ ಹೋರಾಟ. ಅದು ತಮ್ಮ ಜೀವನಕ್ರಮವನ್ನು ಬದಲಾಯಿಸಿಕೊಳ್ಳುವ ಮತ್ತು ಸಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸುವ ಹೋರಾಟ ಯಾವ ವರ್ಣಾಶ್ರಮದ ಆಧಾರದ ಮೇಲೆ ಈ ದೇಶದ ಮೂಲನಿವಾಸಿಗಳನ್ನು ಅಸ್ಪಶ್ರ್ಯತೆ, ಬಹಿಷ್ಕಾರ ಮೌಢ್ಯಗಳ ಆಚರಣೆ ಹಿನ್ನೆಲೆಯಲ್ಲಿ ಗುಲಾಮರನ್ನಾಗಿಸಿದ್ದರೋ, ಅಂತಹ ಗುಲಾಮಗಿರಿಗಿಂದ ತಮ್ಮ ಬದಲಾವಣೆಗಾಗಿ ತಮ್ಮ ಮೇಲೆ ಹೇರಿರುವ ನೀಚ ಮನುವಾದದ ಆಡಳಿತವನ್ನು ತೊಡೆದುಕೊಳ್ಳುವುದಕ್ಕಾಗಿ ಎಲ್ಲರಂತೆ ಸ್ವತಂತ್ರ್ಯರಾಗಿ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ನಡೆದ ಹೋರಾಟವೇ ಭೀಮಾ ಕೊರೆಗಾಂವ್ ಯುದ್ದ.”

ಮಹಾರಾಷ್ಟ್ರದ ಆವತ್ತಿನ ಕಾಲದಲ್ಲಿ ಪೇಶ್ವಗಳ ದರ್ಬಾರ ಹೇಗೆ ನಡೆಯುತ್ತಿತ್ತು ಎಂಬ ಬಗ್ಗೆ ಕೂತುಹಲಕಾರಿ ಸಂಗತಿಯನ್ನು ಹುಡುಕುತ್ತಾ ಹೋದರೆ ಇತಿಹಾಸದ ಒಂದೊಂದು ಪುಟವು ಸಾಕ್ಷಿಯಾಗಿ ನಿಲ್ಲುತ್ತದೆ. ಭಾರತ ಒಂದು ಕಾಲದಲ್ಲಿ ಪೇಶ್ವೆಗಳ ಆಡಳಿತಕ್ಕೊಳಪಟ್ಟಿತ್ತು ಮರಾಠಾ ಇತಿಹಾಸದಲ್ಲಿ ಕ್ರಿಶ 1713 ರ ಕಾಲ ಮಹತ್ವದ ಘಟ್ಟ ಈ ದೇಶದಲ್ಲಿ ಛತ್ರಪತಿ ಮತ್ತು ದೇಶಸ್ಥ ಬ್ರಾಹ್ಮಣರ ಪ್ರಭಾವ ಕ್ರಮೇಣ ಕಡಿಮೆಯಾಗುತ್ತಾ ಹೋದಂತೆ ಆಳ್ವಿಕೆ ಮಾಡುತ್ತಿರುವ ರಾಜ್ಯಗಳಲ್ಲಿ ಆಗಿನ ಕಾಲದಲ್ಲಿ ದಂಡನಾಯಕರುಗಳಾಗಿದ್ದ ಪೇಶ್ವೆಗಳು, ಕೊಂಕಣಿ ಬ್ರಾಹ್ಮಣರು, ಅದೇ ದಾರಿಯಿಂದ ಒಳ ನುಸುಳಿ ಆಡಳಿತ ಸೂತ್ರವನ್ನು ಹಿಡಿದುಕೊಂಡರು ಇಲ್ಲಿಂದಲೇ ಪೇಶ್ವೆಗಳ ದರ್ಬಾರು ಪ್ರಾರಂಭಗೊಂಡಿತು.

ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಒಬ್ಬ ಅಧಿಕಾರಿಯನ್ನು ಪೇಶ್ವೆಗಳೆಂದು ಕರೆಯುತ್ತಿದ್ದರು. ಅವರಿಗೆ ವಿಶೇಷವಾದ ಸೇನಾಧಿಪತಿ ನೀಡಲಾಗಿದ್ದರೂ, ಅದು ಅವರಿಗೆ ಒಲ್ಲದ ಗಂಡನಾಗಿತ್ತು ಆಳುವ ಅರಸನಾಗುವ ಹಂಬಲ ಅವರ ಮನದಲ್ಲಿ ನಿರಂತರವಾಗಿ ಹರಿಯುತ್ತಿತ್ತು. ಅದಕ್ಕಾಗಿ ಅವರು ಸಮಯ ಕಾಯುತ್ತಿದ್ದರು. ಛತ್ರಪತಿ ಶಾಹೂ ಮಹಾರಾಜರ ಸೇನಾಪತಿ ನಂತರ ಜಾಧವ ತೀರಿಕೊಂಡ. ಅವರ ಮೇಲೆ ಪೇಶ್ವೆಯಾಗಿದ್ದ ಬಾಳಾಜಿ ಸೇನಾಧಿಪತಿಯಾದ ಚಾಲಾಕಿತನದಿಂದ ಮತ್ತು ಕುಟಿಲ ತಂತ್ರೋಪಾಯಗಳ ಸಂಚು ಶಾಹು ಮಹಾರಾಜರನ್ನು ಪೇಚೆಗೆ ಸಿಲುಕಿಸಿ ಅಸಹಾಯಕರನ್ನಾಗಿ ಮಾಡಿತು. ಇದನ್ನೇ ಕಾಯುತ್ತಿದ್ದ ಬಾಳಾಜಿ ವಿಶ್ವನಾಥ ಪೇಶ್ವೆ ಪದವಿ ಮೂಲಕ ಇಡೀ ರಾಜ್ಯದ ಉಸ್ತುವಾರಿಯನ್ನು ನೋಡಿಕೊಳ್ಳತೊಡಗಿದ.

ಶಾಹೂ ಮಹಾರಾಜರು ಕೊಲ್ಲಾಪುರದಲ್ಲಿ ಇರುತ್ತಿದ್ದುದ್ದರಿಂದ ಪುಣೆ ಭಾಗದ ಆಡಳಿತವನ್ನೆಲ್ಲಾ ಪೇಶ್ವೆಗಳ ಅಧಿನದಲ್ಲಿಯೇ ನಡೆಯುತ್ತಿತ್ತು. ಬಾಳಾಜಿ ಮರಣದ ನಂತರ 17ನೇ ಎಪ್ರೀಲ್ 1720 ರಂದು ಬಾಜೀರಾವನಿಗೆ ಪೇಶ್ವೆ ಪದವಿಯನ್ನು ನೀಡಲಾಯಿತು. ಇತಿಹಾಸದಲ್ಲಿ ಮೊದಲನೇ ಪೇಶ್ವೆ ಎಂದು ಕರೆಸಿಕೊಂಡ ವ್ಯಕ್ತಿ ಈತನೇ. ಈತ ತನಗೆ ಅಧಿಕಾರ ಬರುತ್ತಿದ್ದಂತೆ ರಾಜಕೀಯ ಮತ್ತು ಆರ್ಥಿಕ ವಿಷಯಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡು ಸಮಸ್ತ ಆಸ್ತಿಯನ್ನು ತನ್ನ ಸ್ವಾಧಿನದಲ್ಲಿ ಇರಿಸಿಕೊಂಡನು.

ಮುಂದೆ ಈತ ಅನೇಕ ಕಟ್ಟಳೆಗಳನ್ನು ಜಾತಿ ಧರ್ಮದ ಮೇಲೆ ಹರಿಬಿಡುತ್ತಾ ಮೊದಲೇ ವರ್ಣಾಶ್ರಮದ ಮೇಲೆ ನಿಂತಿರುವ ದೇಶವನ್ನು ಮತ್ತಷ್ಟು ಬಿಗಿಗೊಳಿಸಿದ. ಹೀಗಾಗಿ ಇಲ್ಲಿನ ಮೂಲನಿವಾಸಿಗಳಾಗಿದ್ದ ಮಹಾರರು ಇವರ ಕಣ್ಣಿಗೆ ಕಾಣಲೇ ಇಲ್ಲ. ಬರೀ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಾ ಯುದ್ದ ಮತ್ತು ರಾಜ್ಯಾಧಿಕಾರವನ್ನು ಅನುಭವಿಸುತ್ತಿದ್ದ ಪೇಶ್ವೆಗಳಿಗೆ ಈ ದೇಶದ ಮೂಲ ನಿವಾಸಿಗಳಾದ ಮಹಾರರಿಗೆ ಯಾವುದೇ ಬದಲಾವಣೆಗೆ ಅನೂಕೂಲಗಳನ್ನು ರೂಪಿಸಲಿಲ್ಲ. ತಮಗೆ ಬೇಕಾದ ರೀತಿಯಲ್ಲಿ ಕಾನೂನಗಳನ್ನು ಮಾಡಿಕೊಂಡು ಮತ್ತಷ್ಟು ತಳ ಮಟ್ಟದಲ್ಲಿ ಮಹಾರರನ್ನು ತಳ್ಳಿದರು.

ಇದರಿಂದ ನೊಂದಿದ್ದ ಮಹಾರರ ಉತ್ಸಾಹಿ ಯುವಕ ಶಿದನಾಕ, ಪೇಶ್ವೆಗಳ ಆಡಳಿತದಲ್ಲಿ ಮಹಾರರನ್ನು ಸೇನೆ ಕಾರ್ಯಕ್ಕೆ ನಿಯೊಜಿಸಿಕೊಳ್ಳುವಂತೆ ಪೇಶೆಗಳ ಮುಂದೆ ನಿವೇದನೆ ಮಾಡುತ್ತಾನೆ. ಆಗ ಮತ್ತಿನಲ್ಲಿದ್ದ ಪೇಶೆಗಳು ಶಿದನಾಕನನ್ನು ಆಸ್ತಾನದೊಳಗೆ ಬಿಟ್ಟ ದ್ವಾರ ಪಾಲಕನ ಶಿರಚ್ಚೇದನ ಮಾಡುತ್ತಾನೆ. ಇದು ಶಿದನಾಕನ ಮೇಲೆ ಆಗಾಧ ಪರಿಣಾವನ್ನುಂಟು ಮಾಡುತ್ತದೆ. ಅಲ್ಲಿಂದ ಮರಳಿ ಬಂದ ಶಿದನಾಕ ಈ ವ್ಯವಸ್ಥೆಯಿಂದ ಹೇಗಾದರು ಮಾಡಿ ಸ್ವತಂತ್ರ್ಯವನ್ನು ಪಡೆಯಲೇಬೇಕು ಎಂದು ಆಲೋಚಿಸುತ್ತಾನೆ. ಮಹಾರರಿಗೆ ಉದ್ಯೊಗದಲ್ಲಿ, ಆಸ್ತಿಯಲ್ಲಿ, ಚಿನ್ನ ಆಭರಣಗಳಲ್ಲಿ, ಒಳ್ಳೆ ಬಟ್ಟೆಗಳನ್ನು ಊರಿನ ಮಧ್ಯಭಾಗದಲ್ಲಿ ವಾಸಿಸುವ ಹಕ್ಕು ಇಲ್ಲವಾದ್ದರಿಂದ ಇವೆಲ್ಲದರ ನಿಷೇಧ ಹೇರಿದ್ದ ಮನುವಾದಿ ಸಂಸ್ಕೃತಿಯ ಪೇಶ್ವೆಗಳ ವಿರುದ್ದ  ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತನ್ನ ಸ್ನೇಹಿತರೊಡನೆ ಯೋಚಿಸುತ್ತಾನೆ.

ಮಹಾರರಿಗೆ ಸಾಥ್ ನೀಡಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ:

ಆಗ ತಾನೇ ಭಾರತಕ್ಕೆ ಬಂದಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ತನ್ನ ಸರ್ಕಾರದಲ್ಲಿ ಸೇನೆಗಳಿಗೆ ಯುವಕರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಅದು ಶಿದನಾಕನಿಗೆ ಗೊತ್ತಾದ ತಕ್ಷಣ ಬ್ರಟಿಷ್ ವೈಸ್ ರಾಯಭಾರಿಯನ್ನು ಕಂಡು ನಮ್ಮನ್ನು ನಿಮ್ಮ ಸೇನೆಗೆ ಸೇರಿಸಿಕೊಳ್ಳಬೇಕೆಂದು ಮನವಿ ಮಾಡುತ್ತಾನೆ. ವೈಸ್ ರಾಯಭಾರಿ ಒಪ್ಪಿಗೆ ಸೂಚಿಸಿ ಮಹಾರರನ್ನು ಸೇನೆಗೆ ಸೇರಿಸಿಕೊಲ್ಳುತ್ತಾನೆ.

ಶಿದನಾಕ ತಮ್ಮ ಜನಾಂಗದ ಮೇಲೆ ನಡೆಯುತ್ತಿದ್ದ ಜಾತಿತಾರತಮ್ಯ ಹಿಂಸಾಚಾರ ಅತ್ಯಾಚಾರಗಳನ್ನು ದಬ್ಬಾಳಿಕೆಗಳನ್ನು ಖಂಡಿಸಿ ತನ್ನ ಸ್ನೇಹಿತರೊಡಗೂಡಿ ಬ್ರೀಟಿಷರ ಸಹಾಯದಿಂದ ಪೇಶ್ವೆಗಳ ಮೇಲೆ ದಂಡೆತ್ತಿ ಹೋಗಿತ್ತಿದ್ದ. ಇದು ಪದೇ ಪದೇ ನಡೆಯುತ್ತಿರುವುದನ್ನು ನೋಡಿದ ಪೇಶ್ವೆಗಳು ಒಂದು ಕಡೆ ಮಹಾರರನ್ನು ಸೈನ್ಯಕ್ಕೆ ಸೇರಿಕೊಂಡಿದ್ದರ  ದಂಗೆ ಎದ್ದರು. ಮತ್ತೊಂದಡೆ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವುದಕ್ಕಾಗಿ ಬ್ರಿಟಿಷರ ವಿರುದ್ದ ಯುದ್ದ  ಸಾರಿದರು. ಇದರಿಂದ ಬ್ರಿಟಿಷ್ ವೈಸ್ ರಾಯಭಾರಿ ಯುದ್ದದ ಪರಿಣಾಮಗಳನ್ನು ಬಿಚ್ಚಿಟ್ಟಾಗ ಪೇಶ್ವೆಗಳ ವಿರುದ್ದ ನಮಗೆ ಯುದ್ದ  ಮಾಡಲು ಅವಕಾಶ ನೀಡಿ ಎಂದು ಶಿದನಾಕ ಬ್ರಿಟಿಷ್ ವೈಸ್ ರಾಯಭಾರಿಯನ್ನು ಕೇಳುತ್ತಾನೆ.  ಅಷ್ಟು ದೊಡ್ಡ ಸೈನ್ಯ ಇರುವ ಪೇಶ್ವೆಗಳ ವಿರುದ್ದ ಹೋರಾಡುವುದು ಕಷ್ಟಸಾಧ್ಯ ಎಂದಾಗ ನೀವು ಆಜ್ಞೆ ನೀಡಿ  ನಾವು ಯುದ್ದ ಎದುರಿಸುತ್ತೇವೆ ಎಂದು ಶಿದನಾಕ  ಮನವಿ ಮಾಡಿಕೊಳ್ಳುತ್ತಾನೆ.

ಬ್ರಿಟಿಷ್ ವೈಸ್ ರಾಯಭರಿ ಒಪ್ಪಿಗೆ ಸೂಚಿಸಿದಾಗ   ಶಿದನಾಕ ತನ್ನ 500 ಮಹಾರ ಸೇನೆಯೊಂದಿಗೆ ಯುದ್ದಕ್ಕೆ ಅನಿಯಾಗುತ್ತಾನೆ. ನಾವು ಒಂದು ಹೊಸ ಸ್ವತಂತ್ರ್ಯವನ್ನು ಪಡೆಯಲು ಹೊರಟಿದ್ದೇವೆ. ಸ್ವತಂತ್ರ್ಯದಲ್ಲಿ ನಾವು ಗೆದ್ದರೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅನಿಷ್ಟ ಪದ್ದತಿಗಳಿಗೆ ಮುಕ್ತಿ ಕೊಡಬಹುದು. ಒಂದು ವೇಳೆ ಸೋತರೆ  ನಮಗೆ ಈ ಭೂಮಿಯಿಂದ ಮುಕ್ತಿ ದೊರೆಯಲಿದೆ ಎಂದು ಹೇಳಿದಾಗ ಯುದ್ದ ಉತ್ಸಾಹದಲ್ಲಿದ್ದ ಮಹಾರ ಯೋಧರು ತಮ್ಮ ಬಿಡುಗಡೆಗಾಗಿ ಅತ್ಯಂತ ಉತ್ಸಾಹ ಭರಿತವಾಗಿ ಹೋರಾಟಕ್ಕೆ ಸಜ್ಜಾಗುತ್ತಾರೆ.

ಹೋರಾಟದ ಮುನ್ನಡೆಯನ್ನು ವಹಿಸಿದ ಶಿದನಾಕ ತನ್ನ ಸೇನೆಯನ್ನು ಡಿಸೆಂಬರ 31, 1817 ರಂದು ಶಿರೂರ ಮಾರ್ಗವಾಗಿ 500 ಪದಾತಿದಳ, 26 ಆಕಾರದ ತೋಪುಗಳು, ಪೂನಾ ರೆಗ್ಯೂಲರ್ ಹಾರ್ಸನ 250 ಅಶ್ವದಳ 24 ಯುರೋಪಿನ ಗನ್ಸಗಳನ್ನು ತೆಗೆದುಕೊಂಡು ಹೊರಟ ಸೈನ್ಯ ಜನೇವರಿ 1, 1818 ರಂದು ಭೀಮಾ ಕೊರೆಗಾಂವ ನದಿಯ ತಟದಲ್ಲಿ ಸುಮಾರು 27 ಕಿಮೀ ನಡೆದು ಬಂದು ವಿಶ್ರಾಂತಿ ಪಡೆಯುತ್ತಿರುತ್ತಾರೆ.  ಮೊದಲೇ ದಣಿದಿದ್ದ ಶಿದನಾಕನ ಸೈನ್ಯದ ಮೇಲೆ ಪೇಶ್ವೆಗಳ 25 ಸಾವಿರ ಅಶ್ವದಳ 3 ಸಾವಿರ ಕತ್ತಿ ಹಾಗೂ ಬರ್ಜಿದಳಗಳು, ಆನೆದಳಗಳು ಸೇರಿ ಒಮ್ಮೆಲೆ ಮೇಲೆ ದಾಳಿ ಮಾಡುತ್ತಾರೆ.

ಜಾತಿ ತಾರತಮ್ಯ, ಶೋಷಣೆ,  ಬಹಿಷ್ಕಾರ ಅನೇಕ ಯಾತನೆಗಳನ್ನು ಅನುಭವಿಸಿದ್ದ ಮಹಾರರ ಯೋಧರಿಗೆ ಇದೊಂದು ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಇದರ ಪರಿಣಾಮವಾಗಿ ಶಿದನಾಕ ಪ್ರತಿದಾಳಿ ನಡೆಸಿ  ಇಡಿ ರಾತ್ರಿ ಪೇಶ್ವೆಗಳೊಂದಿಗೆ ಯುದ್ದ ಎದುರಿಸಿ  ಕೇವಲ 12 ಘಂಟೆಗಳಲ್ಲಿ ಶಿದನಾಕನ ಸೈನ್ಯ ಪೇಶ್ವೆಗಳ 30 ಸಾವಿರದಷ್ಟಿದ್ದ ಸೈನ್ಯವನ್ನು ಕೇವಲ 500 ಜನ ಮಹಾರ ಯೋಧರು ಸೋಲಿಸಿ ಹಿಮ್ಮೆಟ್ಟಿಸಿ ವಿಜಯಶಾಲಿಗಳಾಗುತ್ತಾರೆ. ಅವರ ಸಾವಿರಾರು ವರ್ಷಗಳ ನೋವಿನ ಕೂಗು ಮತ್ತು ಸ್ವಾಭಿಮಾನದ ಬದುಕಿನ ಗೆಲುವು ಅದಾಗಿತ್ತು.

ಇಂತಹ ಒಂದು ಘಟನೆ ಯಾವ ರಾಮಾಯಣ, ಮಹಾಭಾರತ ದೊಡ್ಡ ಘಟನೆಗಳೆಂದು ನಾವೂ ಕರೆಯುತ್ತೇವೆಯೊ ಅದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ ಎಂದರೆ ತಪ್ಪಾಗಲಾರದು. ಇತಿಹಾಸವನ್ನು ಉದ್ದೇಶ ಪೂರ್ವಕವಾಗಿವೆ ಬಚ್ಚಿಟ್ಟಿರು. ಇದನ್ನು ಬಾಬಾಸಾಹೇಬ ಅಂಬೇಡ್ಕರವರು ಸಂಪೂರ್ಣವಾದ ಇತಿಹಾಸವನ್ನು ಕೆದಕಿ ನಡೆದ ಸಂಗತಿಯನ್ನು ನಮ್ಮ ಮುಂದೆ ಇಟ್ಟದ್ದಾರೆ. ಈ ಯುದ್ದದಲ್ಲಿ  ಮಡಿದ 22 ಜನರ ಹೆಸರುಗಳನ್ನು ಬ್ರಿಟಿಷ್ ಸರ್ಕಾರ ಕೋರೆಗಾಂವ ವಿಜಯೋತ್ಸವದ ಅಂಗವಾಗಿ ಅವರ ಹೆಸರುಗಳನ್ನು ವಿಜಯಸ್ತಂಭದಲ್ಲಿ ಕೆತ್ತಿಸಿದ್ದಾರೆ. ಅದು ಇವತ್ತಿಗೂ ದಾಖಲೆಯಾಗಿ ಉಳಿದಿದೆ.

ಕೋರೆಗಾಂವ್ ಯುದ್ದದಲ್ಲಿ ಮಡಿದ ಮಹಾರ್ ಕಲಿಗಳ ಹೆಸರು :

ಈ ಹೋರಾಟದಲ್ಲಿ ಮಡಿದ ನಮ್ಮ ಮಹಾರ್ ಕಲಿಗಳಾದ ಸಿನನಾಕ ಕಮಲನಾಕ, ರಾಮನಾಕ ವಪನಾಕ, ಗೊಂದನಾಕ ಕೋಡೆನಾಕ, ರಾಮನಾಕ ಗಣನಾಕ, ಕಾಳನಾಕ ಕೊಂಡನಾಕ, ಭಾಗನಾಕ ಹರನಾಕ. ವಪನಾಕ ರಾಮನಾಕ, ಅಂಬರನಾಕ ಕಾನನಾಕ, ರೂಪನಾಕ ಲಖನಾಕ, ಗಣನಾಕ ಬಾಳನಾಕ, ಕಾಳನಾಕ ಕೊಂಡನಾಕ, ವಿಟನಾಕ ಧಾಮನಾಕ, ರಾಜನಾಕ ಗಣನಾಕ, ವಪನಾಕ ಹರನಾಕ, ದೈನನಾಕ ವಾನನಾಕ, ಧರಮನಾಕ ದೇವನಾಕ, ಅನನಾಕ ಗೋಪಾಳನಾಕ, ಧರಮನಾಕ ಬಾಳನಾಕ, ಹರನಾಕ ಹೀರನಾಕ, ಜೇಠನಾಕ ದೈನನಾಕ, ಗಣನಾಕ ಲಖನಾಕ ಇವರೆಲ್ಲಾ ಇವತ್ತು ನಮಗೆ ಆದರ್ಶವಾಬೇಕಾಗಿದೆ.

ಇವರು ಯಾವುದೇ ಯುದ್ದ ಬಯಸಿದವರಲ್ಲ. ರಕ್ತಪಾತ ಬಯಸಿದವರಲ್ಲ. ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ದ  ಸ್ವತಂತ್ರ್ಯಗೊಳ್ಳಲು ಹೋರಾಡಿ ಮಡಿದ ವೀರ ಯೋಧರು. ಇವರ್ಯಾರು ಕೂಡಾ ಅಕ್ಷರಸ್ಥರಾಗಿರಲಿಲ್ಲ. ಆದರೂ ತಮ್ಮ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳನ್ನು ಅರಿತುಕೊಂಡು ಮುನ್ನುಗಿದರು. ಆದರೆ ಇವತ್ತು ಎಲ್ಲಾ ರೀತಿಯ ವಿದ್ಯಾವಂತರಿದ್ದು, ನಮ್ಮ ಮೇಲಿನ ದೌರ್ಜನ್ಯಗಳನ್ನು ಎತ್ತಿತೋರಿಸುವ ಮನೋಭಾವನೆ ಬರುತ್ತಿಲ್ಲ. ಇವರ ಆದರ್ಶ ನಮಗೆ ಮಾದರಿಯಾಗಬೇಕು. ಅದಕ್ಕೆ ಬಾಬಾಸಾಹೇಬ ಅಂಬೇಡ್ಕರವರು ಎಜುಕೆಟೆಡ್ ಆರ್ ಪೂಲ್ಸ್  ಎಂದು ಹೇಳಿದ್ದರು. ಇಂತಹ ಇತಿಹಾಸವನ್ನು ನಮ್ಮ ಮುಂದೆ ಇಟ್ಟ ಬಾಬಾಸಾಹೇಬರು ತಮ್ಮ ಜೀವಿತಾವಧಿಯಲ್ಲಿ ಪ್ರತಿವರ್ಷವೂ ಕೂಡಾ ಭೀಮಾ ಕೋರೆಗಾಂವಕ್ಕೆ ಸ್ಥಳಕ್ಕೆ ಭೇಟಿ ನೀಡಿ ಮಡಿದ ಯೋಧರಿಗೆ ಗೌರವ ಅರ್ಪಿಸುತ್ತಿದ್ದರು.  ತಮ್ಮ ಅನೂಯಾಗಳಿಗೂ ಕೂಡಾ ಇಲ್ಲಿಗೆ ಭೇಟಿ ನೀಡುವಂತೆ ಹೇಳುತ್ತಿದ್ದರು.

ಬಾಬಾಸಾಹೇಬ ಅಂಬೇಡ್ಕರವರು ಮಡಿದ ಯೋಧರ ಸ್ಮರಣೆಗಾಗಿ ಸ್ಮೃತಿ ದಿನವನ್ನಾಗಿ ಆಚರಿಸಿ ಎಂದು ಕರೆಕೊಟ್ಟಿದ್ದರು. ಇಂತಹ ಇತಿಹಾಸವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ನಾವು ಯಾವುದೋ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿ ಹೊಸ ವರ್ಷವನ್ನು ವಿಜೃಂಭಣೆಯಿಂದ ಆಚರಿಸುವ ಬದಲು ನಮ್ಮದೇ ದೇಶದ ಮೂಲ ನಿವಾಸಿಗಳ ಇತಿಹಾಸವನ್ನು ಚಿಂತಿಸುವ ಅಗತ್ಯ ಇದೆ. ಬನ್ನಿ ಸ್ಮೃತಿದಿವನ್ನು ಆಚರಿಸೊಣ 201 ನೇ ವರ್ಷದ ಭೀಮಾ ಕೋರೆಗಾಂವ ವಿಜಯೋತ್ಸವಕ್ಕೆ ಜಯವಾಗಲಿ ಜೈ ಭೀಮ್ ಜೈ ಭಾರತ್.

-ಶರೀಫ್ ಡಿ ಬಿಳೆಯಲಿ. ಅಧ್ಯಕ್ಷರು, ಗೌತಮ ಬುದ್ದ ಸೇವಾ ಸಂಸ್ಥೆ
ಬೆಟಗೇರಿ. ಮೊ.7259887060

 

Leave a Reply

Your email address will not be published.