ಅಂಬೇಡ್ಕರ್ ರನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದು ವಿಷಾದಕರ: ನ್ಯಾ.ಮೂ. ನಾಗಮೋಹನದಾಸ್


ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾ ಸ್ವಾಮೀಜಿ ವೇದಿಕೆ (ಬೆಳಗಾವಿ): ಕಾರ್ಮಿಕರು, ಮಹಿಳೆಯರು, ಶೋಷಿತರು ಹೀಗೆ ಎಲ್ಲಾ ವರ್ಗಗಳ ಜನರ ಕಲ್ಯಾಣಕ್ಕಾಗಿ ಅತ್ಯಂತ ಪ್ರಭಾವಶಾಲಿ ಸಂವಿಧಾನವನ್ನು ಭಾರತಕ್ಕೆ ನೀಡಿದ ಡಾ. ಅಂಬೇಡ್ಕರ್ ಅವರನ್ನು ಒಂದು ಜಾತಿ ನಾಯಕನನ್ನಾಗಿ ಬಿಂಬಿಸುತ್ತಿರುವುದಕ್ಕೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಶಾಸಕ ಸತೀಶ ಜಾರಕಿಹೊಳಿ ಸಂಸ್ಥಾಪಕತ್ವದ ಮಾನವ ಬಂಧುತ್ವ ವೇದಿಕೆಯು ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಬೆಳಗಾವಿ ಸದಾಶಿವನಗರದ ಬುದ್ದ ಬಸವ ಅಂಬೇಡ್ಕರ್ ಶಾಂತಿಧಾಮ (ಸ್ಮಶಾನ) ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೌಢ್ಯ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಗುರುವಾರ ಉದ್ಘಾಟನಾ ಭಾಷಣ ಮಾಡಿದರು.

ಕಾರ್ಮಿಕ ಕಲ್ಯಾಣ ನಿಧಿ ಸ್ಫಾಪನೆ, ಹೆರಿಗೆ  ಭತ್ಯೆ , ವಾರಕ್ಕೊಮ್ಮೆ ವೇತನ ಸಹಿತ ರಜೆ, ಮದುವೆ, ವಿಚ್ಛೇದನ , ದತ್ತು ಕಾಯ್ದೆ, ಮಹಿಳಾ ಪರ ಚಿಂತನೆ ಸೇರಿದಂತೆ ಹತ್ತು ಹಲವು ಜನಪರ ವಿಷಯಗಳಿಗಾಗಿ ಹೋರಾಟ ನಡೆಸಿದ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು  ಸತ್ಯಕ್ಕೆ ಬಗೆದ ದ್ರೋಹ. ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಈಗ ಬಂದಿದೆ ಎಂದರು.

ಅಂಬೇಡ್ಕರ್ ಭಾರತಕ್ಕೆ ಕೊಟ್ಟ ಸಂವಿಧಾನವನ್ನು ಅಮೇರಿಕೆ ಸೇರಿದಂತೆ ಇಡೀ ವಿಶ್ವವೇ ಮಾನ್ಯ ಮಾಡಿ, ಶ್ರೇಷ್ಠ ಸಂವಿಧಾನ ಎಂದು ಬಣ್ಣಿಸಿವೆ. ಅಮೇರಿಕವು ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿ ಅದರ ಕೆಳಗೆ symbol of knowledge ೆ ಎಂದು ಬರೆಸಿದೆ. ಪ್ರತಿ ವರ್ಷ ಏಪ್ರಿಲ್ 14 ನ್ನು knowledge day ಎಂದು ಆಚರಿಸುವಂತೆ ವಿಶ್ವಸಂಸ್ಥೆ ಶಿಫಾರಸ್ಸು ಮಾಡಿರುವುದು ಸಣ್ಣ ಸಂಗತಿಯೇನಲ್ಲ. ಹೀಗಾಗಿ ಅಂಬೇಡ್ಕರ್ ಒಂದು ದೇಶ, ಜಾತಿಯ ನಾಯಕರಲ್ಲ. ಅವರೊಬ್ಬ ಜಾಗತಿಕ ಧುರೀಣ ಎಂದು ನಾಗಮೋಹನದಾಸ್ ಬಣ್ಣಿಸಿದರು.

ಅಂಬೇಡ್ಕರ್ ಅವರು ಒಂದು ವ್ಯಕ್ತಿಯಾಗಿ ಅಲ್ಲ, ದಂತಕಥೆಯಾಗಿ ಬೆಳೆಯುತ್ತಿದ್ದಾರೆ. ಅದನ್ನು ನಮ್ಮ ಜನರಿಗೆ ಅರಿವು ಮಾಡಿಸಿಕೊಡುವ ಅಗತ್ಯವಿದೆ. ಅಂಬೇಡ್ಕರ್ ಅವರನ್ನು ಅರಿತುಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದೂ ಅವರು ಹೇಳಿದರು.

ಹಾಗೆ ನೋಡಿದರೆ ಸಂವಿಧಾನ ಬಂದ ಮೇಲೆಯೇ ನಿಜವಾದ ಭಾರತ ನಿರ್ಮಾಣವಾಗಿದೆ. ಜಾತಿ ವ್ಯವಸ್ಥೆಯಿಂದ ರೋಸಿ ಹೋಗಿದ್ದ ದೇಶದಲ್ಲಿ ಚಹಾ ಮಾರುವವನೊಬ್ಬ ಪ್ರಧಾನಿಯಾಗಿದ್ದರೆ, ರೈತನ ಮಗನೊಬ್ಬ ನ್ಯಾಯಮೂರ್ತಿಯಾಗಿದ್ದರೆ, ದಲಿತನೊಬ್ಬ ಉನ್ನತ ಹುದ್ದೆಗೆ ಏರಿದ್ದರೆ ಅದಕ್ಕೆ ಸಂವಿಧಾನ ಕಾರಣ ಎಂದು ಅವರು ಹೇಳಿದರು.

ಇಷ್ಟೆಲ್ಲದರ ನಡುವೆಯೇ ದೇಶದಲ್ಲಿ ಇನ್ನೂ ಸಮಸ್ಯೆಗಳು ತಾಂಡವವಾಡುತ್ತಿವೆ. ಭಯೋತ್ಪಾದನೆ, ಅಪರಾಧೀಕರಣ, ಮೂಲಭೂತವಾದ  ಇನ್ನೂ ಮೊದಲಾದವುಗಳು ಸವಾಲಾಗಿ ಕಾಡುತ್ತಿವೆ. ಇವೆಲ್ಲದಕ್ಕೂ ಸಂವಿಧಾನವೇ ಕಾರಣ ೆಂದು ಸುಳ್ಳು ವಾದ. ಸ್ವತಃ ಅಂಬೇಡ್ಕರ್ ಅವರೇ ಸಂವಿಧಾನವನ್ನು ಅರ್ಪಿಸುವ ಸಂದರ್ಭದಲ್ಲಿ ನೀಡಿದ್ದ ಎಚ್ಚರಿಕೆ ಇಲ್ಲಿ ಗಮನಾರ್ಹ.

ಎಷ್ಟೇ ಒಳ್ಳೆಯ ಸಂವಿಧಾನವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಸರಿಯಾಗಿಲ್ಲದಿದ್ದರೆ ಸಂವಿಧಾನವೇ ಕೆಟ್ಟದಾಗಿ ಬದಲಾಗುತ್ತದೆ. ಉತ್ತಮ, ಮತ್ತು ಪ್ರಸ್ತುತ ಸಂವಿಧಾನವನ್ನು ಉಳಿಸಿಯೇಕೊಳ್ಳಬೇಕಾದ ಕೆಲಸ ಇಂದು ಆಗಬೇಕಾಗಿದೆ ಎಂದರು.

ಯಾರೋ ಒಬ್ಬರು ಖುರಾನ್ ಪವಿತ್ರ ಗ್ರಂಥ ಎಂದುಕೊಳ್ಳುತ್ತಾರೆ, ಇನ್ನಾರೋ ಒಬ್ಬರು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂಬ ಹೇಳಿಕೆ ನೀಡುತ್ತಾರೆ. ಅಲ್ಲ ಸ್ವಾಮಿ ಬದಲಿಸುವುದಾದರೆ ಪರ್ಯಾಯ ಏನು ಕೊಡುತ್ತೀರಿ ಎಂದು ಪ್ರಶ್ನಿಸಿದರು.

ಈ ಸಂವಿಧಾನಕ್ಕೆ ಪರ್ಯಾಯ ನೀಡದಿದ್ದರೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯವನ್ನು ಕಳೆದುಕೊಳ್ಳುತ್ತೇವೆ, ಹಕ್ಕು ಕಳೆದುಕೊಳ್ಳುತ್ತೇವೆ, ಗುಲಾಮಗಿರಿಗೆ ತಳ್ಳಲ್ಪಡುತ್ತೇವೆ ಎಂದು ಅವರು ಎಚ್ಚರಿಸಿದರಲ್ಲದೇ ಇಂತಹ ಸಂವಿಧಾನವನ್ನು ಉಳಿಸಿಕೊಳ್ಳುವ ಜತೆಗೆ ಅದನ್ನು ಅಮೂಲಾಗ್ರವಾಗಿ ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮೌಢ್ಯ  ಇರುವಲ್ಲಿ ಶೋಷಣೆ , ಅಸಮಾನತೆ, ಲಿಂಗಭೇದ  ಇರುತ್ತವೆ. ಈ ಅನಿಷ್ಠ ನಿವಾರಣೆಗಾಗಿ ಮೌಢ್ಯ ಹೊಡೆದೋಡಿಸಿ ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳುವ ಅಗತ್ಯ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫೆಡ್ ಡಿಸೋಜಾ, ನಾಲ್ಕು ವರ್ಷಗಳ ಹಿಂದೆ ಆರಂಭವಾದ ಮೌಢ್ಯ ವಿರೋಧಿ ಹೋರಾಟವು ಒಂದು ಚಳುವಳಿ, ಆಂದೋಲನದ ಸ್ವರೂಪ ಪಡೆದುಕೊಳ್ಳುತ್ತಿರುವುದು ಸಂತಸಕರ ಸಂಗತಿ ಎಂದರು.

ಮೌಢ್ಯತೆಗೆ ಸೆಡ್ಡು ಹೊಡೆದು ಸ್ಮಶಾನದಲ್ಲಿ ಐತಿಹಾಸಿಕ ಕಾರ್ಯಕ್ರಮ ಮಾಡುವ ಧೈರ್ಯವಂತ ರಾಜಕಾರಣಿ ಈ ದೇಶದಲ್ಲಿ ಮತ್ತೊಬ್ಬರು ಸಿಗಲಿಕ್ಕಿಲ್ಲ. ವೈಜ್ಞಾನಿಕ ಮನೋಭಾವನೆ ಬೆಳೆಸಿ, ಪುರೋಹಿತಶಾಹಿ ಪ್ರೇರಿತ ಕಂದಾಚಾರ , ಮೌಢ್ಯದ ಬೇರುಗಳನ್ನು ಕಿತ್ತೊಗೆಯಲು ನಡೆದಿರುವ  ಈ ಚಳವಳಿ ರಾಜಕಾರಣದ ದಿಕ್ಕು ಬದಲಿಸುವ ನಿಟ್ಟಿನಲ್ಲಿ ಸಾಗಬೇಕು ಎಂಬುದು ವೇದಿಕೆಯ ಆಶಯವಾಗಿದೆ ಎಂದು ಅವರು ಹೇಳಿದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಹಿರಿಯ ಸಾಹಿತಿ, ಚಿಂತಕ , ನಾಡೋಜ ಬರಗೂರು ರಾಮಚಂದ್ರಪ್ಪ, ಪ್ರೊ. ವಸಂತ ಹಂಕಾರೆ. ಡಾ. ಮೀನಾಕ್ಷಿ ಬಾಳಿ, ಪ್ರಗತಿಪರರು, ಸಾಹಿತಿಗಳು ಇತರರು ಇದ್ದರು. ಮಾನವ ಬಂಧುತ್ವ ವೇದಿಕೆ ತಂಡದವರು ವೈಚಾರಿಕ ಗೀತೆ ಹಾಡಿದರು. . ವಿಭಾಗೀಯ ಸಂಚಾಲಕ ಅನಂತ ನಾಯಕ ನಿರೂಪಿಸಿದರು, ಆರ್. ಜಯಕುಮಾರ್ ವಂದಿಸಿದರು.

Leave a Reply

Your email address will not be published.