ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಕಡ್ಡಾಯಗೊಳಿಸಿ: ಸಚಿವ ವೆಂಕಟರಾವ್‌ಗೆ ಮನವಿ


ಕೊಪ್ಪಳ:  ರಾಜ್ಯದ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳ  ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲೆಯಾದ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಪಶು ಸಂಗೋಪನಾ ಮತ್ತು ಮೀನುಗಾರಿಕೆ ಸಚಿವರಾದ ವೆಂಕಟರಾವ್ ನಾಡಗೌಡರ್‌ವರಿಗೆ  ನಗರದ ಎಸ್‌ಎಫ್‌ಎಸ್ ಶಾಲೆಯ ಹತ್ತಿರ ಕೊಪ್ಪಳ ಜಿಲ್ಲಾ ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ರಾಜ್ಯ ಕರಾಟೆ ಶಿಕ್ಷಕರ ಸಂಘದ ಕ್ರೀಡಾ ಕಾರ್ಯದರ್ಶಿ ಮೌನೇಶ ಎಸ್ ವಡ್ಡಟ್ಟಿ ನೇತೃತ್ವದಲ್ಲಿ ಭಾನುವಾರ ಗದಗ ಗೆ ತೆರಳುತ್ತಿದ್ದ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು ಹೆಣ್ಣು ಮಕ್ಕಳು ಮನೋಬಲ ಮತ್ತು ಆತ್ಮ ಸ್ಥೈರ್ಯವನ್ನು ಹೆಚ್ಚಿಸಲು ಆತ್ಮ ರಕ್ಷಣೆಯ ಕಲೆಯಾದ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶಾಲಾ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘದ ಕ್ರೀಡಾ ಕಾರ್ಯದರ್ಶಿ ಮತ್ತು ಕೊಪ್ಪಳ ಜಿಲ್ಲಾದ್ಯಕ್ಷ ಮೌನೇಶ ಎಸ್ ವಡ್ಡಟ್ಟಿ, ತರಬೇತಿದಾರರಾದ ವಿಠ್ಠಲ ಹೆಚ್, ಸೋಮಲಿಂಗ ಕವಲೂರು, ಮುಖಂಡರಾದ ವಿರೇಶ ಮಾಹಾಂತಯ್ಯನಮಠ, ಅಯೂಬ್ ಅಡ್ಡೇವಾಲೆ, ಮಂಜುನಾಥ ಹುರಕಡ್ಲಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.