ಅಮವಾಸ್ಯೆ ದಿನ ಸ್ಮಶಾನದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ: ದೇಶದ ಇತಿಹಾಸದಲ್ಲಿ ಹೊಸ ದಾಖಲೆ


ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾ ಸ್ವಾಮೀಜಿ ವೇದಿಕೆ (ಬೆಳಗಾವಿ): ಅಮವಾಸ್ಯೆ ದಿನ ಸ್ಮಶಾನದಲ್ಲಿ ಮದುವೆಯೊಗುವ ಮೂಲಕ ಯುವಕ-ಯುವತಿಯರಿಬ್ಬರು ಭಾರತ ದೇಶದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಶಾಸಕ ಸತೀಶ ಜಾರಕಿಹೊಳಿ ಸಂಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆಯು ಡಿಸೆಂಬರ್ 6 ಮಹಾಪರಿನಿರ್ವಾಣ ದಿನದಂದು ಗುರುವಾರ ಬೆಳಗಾವಿಯ ಸದಾಶಿವ ನಗರದ ಬುದ್ಧ ,ಬಸವ, ಅಂಬೇಡ್ಕರ್ ಶಾಂತಿಧಾಮ (ಸ್ಮಶಾನ ) ದಲ್ಲಿ ಹಮ್ಮಿಕೊಂಡಿದ್ದ ಐದನೇ ವರ್ಷದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆಯನ್ನು ಈ ಸರಳ ಅಂತರ್ಜಾತಿಯ ವಿವಾಹದ ಮೂಲಕ ಉದ್ಘಾಟಿಸಿದ್ದು ವಿಶೇಷ.
ಅನ್ಯ ಜಾತಿಗೆ ಸೇರಿದ ಸೋಪಾನ ಬಾಳಕೃಷ್ಣ ಜಾಂಬೋಟಿ ಹಾಗೂ ರೇಖಾ ಹಿರೇಬಾಗೇವಾಡಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಶಾಸಕ ಸತೀಶ ಜಾರಕಿಹೊಳಿ, ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್,  ಬಸವಧರ್ಮ ಟ್ರಸ್ಟ್ ಅಧ್ಯಕ್ಷ ಗುರುಬಸವಲಿಂಗ ಪಟ್ಟದದೇವರು, ಕಲಬುರಗಿಯ ವಿಶ್ವನಾಥ ಕೊರಣೇಶ್ವರ ಅಪ್ಪಾ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ,ಹಿರಿಯ ಸಾಹಿತಿ, ಚಿಂತಕ , ನಾಡೋಜ ಬರಗೂರು ರಾಮಚಂದ್ರಪ್ಪ, ಪ್ರೊ. ವಸಂತ ಹಂಕಾರೆ. ಡಾ. ಮೀನಾಕ್ಷಿ ಬಾಳಿ, ವೇದಿಕೆ ರಾಜ್ಯ ಸಂಚಾಲಕ ವಿಲ್ ಪ್ರೆಡ್ ಡಿಸೋಜಾ, ವಿಭಾಗೀಯ ಸಂಚಾಲಕ ಅನಂತ ನಾಯಕ, ಆರ್ ಜಯಕುಮಾರ, ಕೆ.ಎಸ್. ಸತೀಶಕುಮಾರ್ , ಪ್ರಗತಿಪರರು, ಸಾಹಿತಿಗಳು ಇತರರು ಈ ಐತಿಹಾಸಿಕ ಮದುವೆಗೆ ಸಾಕ್ಷಿಯಾದರು.
ಮಾನವ ಬಂಧುತ್ವ ವೇದಿಕೆಯ ಮತ್ತೊಬ್ಬ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ನೂತನ ದಂಪತಿಗೆ ಕುವೆಂಪು ಮಂತ್ರ ಮಾಂಗಲ್ಯದ ಪ್ರತಿಜ್ಞಾವಿಧಿ ಬೋಧಿಸಿದರು.
ಒಂದೆಡೆ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ ಸಂಭ್ರಮ ಪಡುತ್ತಿದ್ದರೆ ಇನ್ನೊಂದೆಡೆ ಸ್ಮಶಾನದಲ್ಲಿ ಮೃತರೊಬ್ಬರ ಅಂತ್ಯಕ್ರಿಯೆಯೂ ನಡೆಯುತ್ತಿತ್ತು.
ವರದಕ್ಷಿಣೆ ರಹಿತವಾಗಿ, ಅತ್ಯಂತ ಸರಳವಾಗಿ ನಡೆದ ಈ ವಿವಾಹ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 40 ಸಾವಿರಕ್ಕೂ ಅಧಿಕ ಜನರು ನವದಂಪತಿಗೆ ಚಪ್ಪಾಳೆ ಮೂಲಕ ಶುಭಕೋರಿದರು.

Leave a Reply

Your email address will not be published.