ಬೌದ್ಧದಮ್ಮ ರಥಯಾತ್ರೆ ಸ್ವಾಗತಕ್ಕೆ ಭರದ ಸಿದ್ಧತೆ


ಪಾಂಡವಪುರ : ಡಿ.4 ರಂದು ಕೆ.ಆರ್.ಪೇಟೆ ತಾಲ್ಲೂಕಿನ ಮೂಲಕ ಪಾಂಡವಪುರ ತಾಲ್ಲೂಕಿಗೆ ಪ್ರವೇಶಿಸಲಿರುವ ಬೌದ್ಧದಮ್ಮ ರಥಯಾತ್ರೆ ಸ್ವಾಗತಕ್ಕೆ ಅದ್ಧೂರಿ ಸಿದ್ದತೆ ನಡೆಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧದಮ್ಮ ರಥಯಾತ್ರೆ ಸ್ವಾಗತ ಸಮಿತಿಯ ತಾಳಶಾಸನ ಮೋಹನ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ನೇ ಅಕ್ಟೋಬರ್ 1956 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧಧರ್ಮ ಸ್ವೀಕರಿಸಿದ ದಿನದ ನೆನಪಿಗಾಗಿ ಈ ರಥಯಾತ್ರೆ ಕಾರ್ಯಕ್ರಮ ಹಮ್ಮಿಮೊಂಡಿರುವುದಾಗಿ ಹೇಳಿದರು.

ಕರುಣೆ, ಪ್ರೀತಿ, ಸಮಾನತೆಯನ್ನು ಧ್ಯೇಯವಾಗಿರಿಸಿ, ವೈಜ್ಞಾನಿಕ ತಳಹದಿಯ ಮೇಲೆ 2500 ವರ್ಷಗಳ ಹಿಂದೆ ಭಾರತದಲ್ಲಿ ಸ್ಥಾಪಿತವಾದ ಬೌದ್ಧದರ್ಮ ಇಂದು ವಿಶ್ವದಲ್ಲಿ 35 ರಾಷ್ಟ್ರಗಳಲ್ಲಿ ಪಸರಿಸಿದೆ. ಇದರಲ್ಲಿ ಪ್ರಮುಖವಾಗಿ ಬೌದ್ಧ ಧರ್ಮ ಅನುಸರಿಸುವ ಜಪಾನ್, ಚೀನಾ, ಥೈಲಾಂಡ್ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಾಗಿ ಬೆಳೆದಿವೆ, ಆದರೆ ಬೌದ್ಧಧರ್ಮಕ್ಕೆ ಜನ್ಮ ನೀಡಿದ ಭಾರತ ದೇಶದಲ್ಲಿ ನಾವುಗಳು ಇಂದಿಗೂ ಸಹಾ ಜಾತಿಯತೆ, ಅಸಮಾನತೆ ಮತ್ತು ದೌರ್ಜನ್ಯಗಳ ನೆರಳಿನಲ್ಲಿ ಬಾಳುವಂತಾಗಿದೆ. ಈ ನಿಟ್ಟಿನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಗೌತಮ ಬುದ್ಧ ಅವರ ವಿಚಾರ ಧಾರೆಗಳನ್ನು ಮನವರಿಕೆ ಮಾಡಿಕೊಡುವುದರ ಮೂಲಕ ಸಾರ್ವಜನಿಕರಲ್ಲಿ ಮೌಢ್ಯತೆ, ಕಂದಾಚಾರ, ಅಸಮಾನತೆ, ಜಾತಿಯತೆಯನ್ನು ತೊಡೆದು ಹಾಕುವ ಪ್ರಯತ್ನ ನಡೆಸಲಾಗಿದೆ ಎಂದರು.

ಮಂಡ್ಯದ ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘ ಹಾಗೂ ಬೌದ್ಧ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ನಡೆಯುತ್ತಿರುವ ಈ ರಥಯಾತ್ರೆಯನ್ನು ಡಿ.4ರ ಮದ್ಯಾಹ್ನ ತಾಲ್ಲೂಕಿನ ಗಡಿಭಾಗವಾದ ಅಶೋಕನಗರದಲ್ಲಿ ತಹಸಿಲ್ದಾರ್ ಡಿ.ಹನುಮಂತರಾಯಪ್ಪ ಅವರ ನೇತೃತ್ವದಲ್ಲಿ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ತಾಲ್ಲೂಕಿಗೆ ಬರಮಾಡಿಕೊಳ್ಳಲಾಗುವುದು. ನಂತರ ರಥಯಾತ್ರೆಯು 4 ದಿನಗಳ ಕಾಲ ತಾಲ್ಲೂಕಿನ 72 ಹಳ್ಳಿಗಳಲ್ಲಿ ಸಂಚರಿಸಲಿದೆ ಎಂದರು.

ದಲಿತ ಮುಖಂಡರಾದ ಬ್ಯಾಡರಹಳ್ಳಿ ಪ್ರಕಾಶ್, ನಂಜುಂಡಸ್ವಾಮಿ, ಕೆ.ಬಿ.ರಾಮು, ಶಿವಕುಮಾರ್, ರವಿಕುಮಾರ್, ನಲ್ಲಹಳ್ಳಿ ಸ್ವಾಮಿ ಇದ್ದರು.

Leave a Reply

Your email address will not be published.