ಮಹಾಪುರುಷರ ಬಗ್ಗೆ ಭಾಷಣ ಮಾಡುವ ಮಕ್ಕಳಿಗೆ ಹೆಲಿಕ್ಯಾಪ್ಟರ್ ಪ್ರವಾಸ: ಸತೀಶ ಜಾರಕಿಹೊಳಿ ಘೋಷಣೆ


ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾ ಸ್ವಾಮೀಜಿ ವೇದಿಕೆ (ಬೆಳಗಾವಿ):ನಮ್ಮ ಬದುಕಿಗೆ ಮಾರ್ಗದರ್ಶನ ನೀಡಿ ಹೋಗಿರುವ ಮಹಾಪುರುಷರ ಬಗ್ಗೆ ಇಂದಿನ ಪೀಳಿಗೆಯಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಪ್ರತಿಪಾದಿಸಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅದಕ್ಕಾಗಿ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ.

ಬುದ್ಧ, ಬಸವ, ಅಂಬೇಡ್ಕರ್ , ಶಿವಾಜಿ, ಶಾಹೂ ಮಹಾರಾಜ, ಟಿಪ್ಪು ಸುಲ್ತಾನ ಸೇರಿದಂತೆ ನಮಗೆ ಅಪಾರ ಆದರ್ಶಗಳನ್ನು ಬಿಟ್ಟು ಹೋಗಿರುವ ಪುಣ್ಯ ಪುರುಷರ ಕುರಿತು ಭಾಷಣ ಮಾಡಿ ಗಮನ ಸೆಳೆಯುವ ಶಾಲಾಮಕ್ಕಳಿಗೆ ತಮ್ಮ ಹೆಲಿಕ್ಯಾಪ್ಟರಿನಲ್ಲಿ ಪ್ರವಾಸ ಮಾಡಿಸಲಾಗುವುದು ಎಂದು ಅವರು ಘೋಷಿಸಿದರು.

ತಮ್ಮ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ಅಂಬೇಡ್ಕರ ಪರಿನಿರ್ವಾಣ ದಿನದಂದು ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು,  ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಕುರಿತು ಭಾಷಣ ಮಾಡಿದ  ಪಿಯುಸಿ ವಿದ್ಯಾರ್ಥಿನಿ ಏಕ್ತಾ ಕಾಡಪ್ಪ ಮಸಾನೆ ಅವರನ್ನು ತುಂಬು ಹೃದಯದಿಂದ ಅಭಿನಂದಿಸಿದರು.

ಹೀಗೆ ಮಹಾಪುರುಷರ ಕುರಿತು ಮಕ್ಕಳು ತಿಳಿದುಕೊಳ್ಳುವುದರಿಂದ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಾಪುರುಷರ ಕುರಿತಾದ ಭಾಷಣ ಸ್ಪರ್ಧೆ ಏರ್ಪಡಿಸಲು ಅವರು ಇದೇ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಸೂಚಿಸಿದರು.

Leave a Reply

Your email address will not be published.