ಸಚಿವ ಸತೀಶ ಜಾರಕಿಹೊಳಿ ಜತೆ ಕಾಣಿಸಿಕೊಂಡ ಶಾಸಕ ಕುಮಠಳ್ಳಿ, ಶ್ರೀಮಂತ ಪಾಟೀಲ್ !


ಅಥಣಿ: ಮಂತ್ರಿ ಸ್ಥಾನ ವಂಚಿತರಾಗಿ ಮುಖಂಡರೊಡನೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಹೋಗುತ್ತಾರೆ ಎನ್ನಲಾಗುತ್ತಿದ್ದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ  ಇಂದು ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯಕ್ರಮದಲ್ಲಿ  ಕಾಣಿಸಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದರು.

ಸಚಿವರಾದ ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಅಥಣಿಗೆ ಆಗಮಿಸಿದ್ದ ಸಚಿವರೊಂದಿಗೆ ವೇದಿಕೆ ಹಂಚಿಕೊಂಡ ಇಬ್ಬರೂ ಶಾಸಕರು ಕಾರ್ಯಕ್ರಮ, ಸುದ್ದಿಗೋಷ್ಠಿಯಲ್ಲೂ ಅವರೊಂದಿಗೇ ಇದ್ದರು.

“ಲೋಕಾ ” ಸಮರದಲ್ಲಿ ಗೆಲುವು:

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ  ವ್ಯಕ್ತಪಡಿಸಿದರು.

ಅಥಣಿ ಭಾಗದಲ್ಲಿ ಈ ಬಾರಿ ಇಬ್ಬರು ಶಾಸಕರು ಹೆಚ್ಚಿರುವುದು ಹಾಗೂ ಕಳೆದ ಹಲವು ತಿಂಗಳಿನಿಂದ ರಾಜ್ಯ ಸರಕಾರ ಉತ್ತಮ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಕಾಗವಾಡ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಂದಿದ್ದರೂ ಅಥಣಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಎಂಬ ಕಾರ್ಯಕರ್ತರ ದೂರಿನ ಬಗ್ಗೆ ಪ್ರಶ್ನಿಸಿದಾಗ, ಇಲ್ಲಿಯ ಶಾಸಕರು ಅನುದಾನ ತರಲು ಸಮರ್ಥರಾಗಿದ್ದಾರೆ. ಅವರೊಡನೆ ಸಹಕರಿಸುವುದಾಗಿ ಭರವಸೆ ನೀಡಿದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತು ಇತರರು ಇದ್ದರು.

Leave a Reply

Your email address will not be published.