ಸ್ಮಶಾನದಲ್ಲಿ ವಿವಾಹವಾದವರಿಗೆ ಪ್ರೋತ್ಸಾಹ ಧನ: ಸತೀಶ ಜಾರಕಿಹೊಳಿ ಸಲಹೆ


ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾ ಸ್ವಾಮೀಜಿ ವೇದಿಕೆ (ಬೆಳಗಾವಿ):ಸಿದ್ದರಾಮಯ್ಯ ಸರಕಾರ ಅಂತರ್ಜಾತಿ ವಿವಾಹವಾದವರಿಗೆ 2 ಲಕ್ಷ ರೂ. ಗಳ ಅನುದಾನ ಘೋಷಿಸಿದ್ದರು. ಈಗ ಕುಮಾರಸ್ವಾಮಿ ಸರಕಾರ ಸ್ಮಶಾನದಲ್ಲಿ ಮದುವೆಯಾಗುವವರಿಗೆ ಅದಕ್ಕಿಂತ ಹೆಚ್ಚು ಸಹಾಯಧನ ನೀಡಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ತಮ್ಮ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ಬೆಳಗಾವಿ ಸದಾಶಿವನಗರದ ಬುದ್ದ ಬಸವ ಅಂಬೇಡ್ಕರ್ ಶಾಂತಿಧಾಮ (ಸ್ಮಶಾನ) ದಲ್ಲಿ  ಗುರುವಾರ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆಯಲ್ಲಿ ಸರಳ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಉದ್ಘಾಟಿಸಿದ ಸೋಪಾನ ಜಾಂಬೋಟಿ ಹಾಗೂ ರೇಖಾ ಹಿರೇಬಾಗೇವಾಡಿ ದಂಪತಿಗೆ ಶುಭ ಕೋರಿ ಅವರು ಮಾತನಾಡಿದರು.

ಕಳೆದ ನಾಲ್ಕು ವರ್ಷಗಳಿಂದ ತಮ್ಮ ವೇದಿಕೆ ಹಮ್ಮಿಕೊಳ್ಳುತ್ತಿರುವ ಮೌಢ್ಯ ವಿರೋಧಿ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಈ ನವಜೋಡಿ ಸ್ಮಶಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಭಯ ಮುಕ್ತ ಸಮಾಜ ನಿರ್ಮಾಣಕ್ಕೆ ಸರಕಾರ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಸ್ಮಶಾನದಲ್ಲಿ ವಿವಾಹವಾಗುವವರಿಗೆ ಹೆಚ್ಚಿನ ಸಹಾಯ ಧನ ನೀಡಬೇಕು ಎಂದು ಅವರು ಕುಮಾರಸ್ವಾಮಿಗೆ ಮನವಿ ಮಾಡಿದರು.

ಅತ್ಯಂತ ಧೈರ್ಯ ತೋರಿ ಮೌಢ್ಯಕ್ಕೆ ಸೆಡ್ಡು ಹೊಡೆದ ನೂತನ ದಂಪತಿಗೆ ಜಾರಕಿಹೊಳಿ ವೇದಿಕೆಯಲ್ಲಿಯೇ ವೈಯಕ್ತಿಕವಾಗಿ 50 ಸಾವಿರ ರೂ. ಗಳನ್ನು ನೀಡಿ ಪ್ರೋತ್ಸಾಹಿಸಿದಾಗ ಸಮಾರಂಭದಲ್ಲಿ ಸೇರಿದ್ದ 40 ಸಾವಿರಕ್ಕೂ ಅಧಿಕ ಜನ ಚಪ್ಪಾಳೆ ಹೊಡೆದು ಸಂಭ್ರಮ ಪಟ್ಟರು.

Leave a Reply

Your email address will not be published.