ಮಹಾರಾಷ್ಟ್ರ, ಮರಾಠಿಗರಿಗಷ್ಟೇ ಶಿವಾಜಿ ಸೀಮಿತನಲ್ಲ, ಆತ ಜಾಗತಿಕ ನಾಯಕ: ಸತೀಶ ಜಾರಕಿಹೊಳಿ ಬಣ್ಣನೆ


ಬೆಳಗಾವಿ(ಕಡೋಲಿ):ಕೆಚ್ಚೆದೆಯ ಹೋರಾಟಗಾರ ಶಿವಾಜಿ  ಮಹಾರಾಜರನ್ನು ಮರಾಠಿಗರಿಗೆ ಅಥವಾ ಮಹಾರಾಷ್ಟ್ರಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರೊಬ್ಬ ಮಹಾನ್ ನಾಯಕ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಬಣ್ಣಿಸಿದರು.

ತಾಲೂಕಿನ ಕಡೋಲಿ ಗ್ರಾಮಪಂಚಾಯ್ತಿ ಎದುರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಶ್ವಾರೂಢ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಸಚಿವರು ಶಿವಾಜಿ ಮಹಾರಾಜರ ಹೋರಾಟ, ಸಾಧನೆ ಯುವಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ಎಂದಿಗೂ ಎಂದೆಂದಿಗೂ ಅವರ ತತ್ವಾದರ್ಶಗಳು ಮುಂದುವರಿಯಬೇಕು ಎನ್ನುವ ಉದ್ದೇಶದಿಂದಲೇ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಅವರು ಹೇಳಿದರು.

ಕನ್ನಡಿಗ-ಮರಾಠಿಗರು ಬೇರೆ ಬೇರೆ ಅಲ್ಲ ಎಂಬುದನ್ನು ಈ ಐತಿಹಾಸಿಕ ದಿನ ಸಾಬೀತು ಪಡಿಸಿದೆ. ಬೆಳಗಾವಿಯನ್ನು ಬೆಂಗಳೂರಿನ ನಂತರದ ಅತ್ಯಂತ ಸುಂದರ ನಗರವನ್ನಾಗಿ ರೂಪಿಸುವುದು ನ್ನ ಗುರಿ. ಅದಕ್ಕಾಗಿ ನಿರಂತರ ಪ್ರಯತ್ನಿಸುವುದಾಗಿಯೂ ಸಚಿವರು ತಿಳಿಸಿದರು.

ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯನ್ನು ಅತ್ಯಂತ ವೇಗವಾಗಿ ಅಭಿವೃದ್ಧಿ ಪಡಿಸಲು ತಾವು ಬದ್ಧ.  ಆ ನಿಟ್ಟಿನಲ್ಲಿಯೇ ಪ್ರಯತ್ನ ಮಾಡುವುದಾಗಿಯೂ ಅವರು ಹೇಳಿದರು.

ಮರಾಠಿಗರಿಗೂ ರಾಜಕೀಯ ಅಧಿಕಾರ ಕೊಡಬೇಕು ಎಂಬ ನಿಟ್ಟಿನಲ್ಲಿಯೇ ರಾಜ್ಯ ಸರಕಾರ ಕಾರ್ಯನಿರ್ವಹಿಸುತ್ತಿದೆ. ನಾವು ಯಾವತ್ತೂ ಭಾಷಾ ಭೇದ ಮಾಡಿಯೇ ಇಲ್ಲ ಎಂದವರು ಹೇಳಿದರು.

ಸ್ವಾಮಿ ವಿವೇಕಾನಂದ ಹಾಗೂ ಜೀಜಾ ಮಾತಾ ಭಾವಚಿತ್ರಕ್ಕೆ ಗಣ್ಯರು ಪುಷ್ಪ ಅರ್ಪಿಸಿದರು.

ಕೇಂದ್ರ‌ದ ಮಾಜಿ ಕೃಷಿ ಸಚಿವ ಶರದ್  ಪವಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಶಿವಾಜಿ ವಂಶಸ್ಥ, ‌ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಗಣೇಶ ಹುಕ್ಕೇರಿ, ಅಂಜಲಿತಾಯಿ ನಿಂಬಾಳ್ಕರ್, ಶ್ರೀಮಂತ ಪಾಟೀಲ್, ಲಕ್ಷ್ಮಿ ಹೆಬ್ಬಾಳಕರ್, ಮಹಾರಾಷ್ಟ್ರದ ‌ಶಾಸಕ ಸಂಧ್ಯಾತಾಯಿ, ಕಡೋಲಿ ದುರದುಂಡೇಶ್ವರ ವಿರಕ್ತ ಮಠದ ಗುರುಬಸವಲಿಂಗ ಸ್ವಾಮೀಜಿ, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪ ಮೇಯರ್ ಮಧುಶ್ರೀ ಪೂಜಾರಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಲಕ್ಷ್ಮಣರಾವ್ ಚಿಂಗಳೆ, ಜಯಶ್ರೀ ಮಾಳಗಿ, ಸರಳಾ ಹಿರೇಕರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published.