ಇತ್ತೀಚಿಗೆ ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಹೆಚ್ಚುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ ಕಳವಳ


ಬೆಳಗಾವಿ(ಕಡೋಲಿ) ಎಲ್ಲ ಧರ್ಮಗಳ ಉದ್ದೇಶ ಮನುಕುಲವನ್ನು ರಕ್ಷಿಸುವುದಾಗಿದೆ, ಆದ್ರೆ  ಇತ್ತೀಚಿನ ದಿನಗಳಲ್ಲಿ ಧರ್ಮ ಧರ್ಮಗಳ ಮಧ್ಯೆ ಸಂಘರ್ಷಗಳು  ಹೆಚ್ಚುತ್ತಿವೆ ಅಂತಾ ಮಜಿ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮ ಪಂಚಾಯಿತಿ ಎದುರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಶಿವಾಜಿ ಮಹಾರಾಜ ಯಾವತ್ತೂ ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ನಡೆಸಿಲ್ಲ. ಬದಲಾಗಿ ರಾಜ ರಾಜರ ಮಧ್ಯೆ ಯುದ್ದ ಮಾಡಿದ್ದಾರೆ. ಧರ್ಮಗಳ ಮಧ್ಯೆ ನಡೆಯುತ್ತಿರುವ ಸಂರ್ಘಗಳು ಕೊನೆಯಾಗಲಿ. ಧರ್ಮದ ಚೌಕಟ್ಟಿನಲ್ಲಿ ಮನುಷ್ಯ ಉದ್ದಾರವಾಗಬೇಕು. ತಳ ಸಮುದಾಯವರ ರಕ್ಷಣೆ ಮಾಡಿ ದೇಶ ಗೌರವಿಸುವ ಕೆಲಸಗಳಾಗಲಿ ಎಂದರು.

ಸ್ವಾಭಿಮಾನದ ಪ್ರತೀಕ ಶಿವಾಜಿ ಮಹಾರಾಜ:

ಶಿವಾಜಿ ಮಹಾರಾಜ ಮರಾಠಿ ಜನಾಂಗಕಷ್ಟೇ ಸಿಮೀತವಲ್ಲ. ಬದಲಾಗಿ ದೇಶದ ಸ್ವಾಭಿಮಾನ ಸಂಕೇತ. ಮಹಾ ಪುರುಷರು ಒಂದೇ ಜಾತಿ, ಧರ್ಮ, ವರ್ಗಕ್ಕೆ ಸಿಮೀತವಲ್ಲ. ಇಡೀ ಮನುಕುಲಕ್ಕೆ ಆದರ್ಶ ವ್ಯಕ್ತಿಗಳು. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಹಾನ್ ನಾಯಕರಿಗೆ ಗೌರವ ಸಲ್ಲಿಸಿದಂತೆ. ನಮ್ಮ ಸರಕಾರದ ಅವಧಿಯಲ್ಲಿ ಎಲ್ಲ ಮಹಾನ್ ನಾಯಕರ ಜಯಂತಿ ಆಚರಣಗೆ ಚಾಲನೆ ನೀಡಲಾಯಿತು.

ಶಿವಾಜಿ ಮಹಾರಾಜ ಧೈರ್ಯ, ಸಾಹಸ, ಕೌಶ್ಯಲ್ಯ, ಯುದ್ದದ ಕಲೆಗಳಿಂದ ಮೇಲೆ ಬಂದವರು. ಕೆಳಹಂತದಿಂದ ಯುವರಾಜರಾಗುವವರೆಗೂ ಸ್ವಾಭಿಮಾನದಿಂದ ಬೆಳೆದವರು. ಎಂತಹ ಸನ್ನಿವೇಶದಲ್ಲಿಯೂ ಸ್ವಾಭಿಮಾನವನ್ನು ಬಿಟ್ಟುಕೊಡದ ಮಾಹಾನ್ ನಾಯಕ ಶಿವಾಜಿ ಮಹಾರಾಜ ಎಂದು ಬಣ್ಣಿಸಿದರು.

ಶಿವಾಜಿ ಮಹಾರಾಜರ ಕಾಲದಲ್ಲಿ ಸಮಾಜವಾದ ಜಾರಿಯಲ್ಲಿತ್ತು.  ಜಾತ್ಯಾತೀತವಾಗಿ  ಆಡಳಿತ ನಡೆಸಿದ್ದರು. ಬರಗಾಲದಂತಹ ಪರಿಸ್ಥಿತಿಯಲ್ಲಿ ರೈತರಿಗೆ ಪರಿಹಾರ, ಆಹಾರ ನೀಡುತ್ತಿದ್ದರು. ಸಾಮಾನ್ಯ ಜನರ ಹಕ್ಕುಗಳನ್ನು ರಕ್ಷಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಿದ್ದರು ಎಂದರು.

ಇದೇ ವೇಳೆ  ಸ್ವಾಮಿ ವಿವೇಕಾನಂದ ಜಯಂತಿ ಶುಭಾಷಯ ತಿಳಿಸಿದ ಸಿದ್ದರಾಮಯ್ಯ, ಹಿಂದೂ ಧರ್ಮದ ಸಂಸ್ಕೃತಿ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡವರು ಸ್ವಾಮಿ ವಿವೇಕಾನಂದರು. ಅವರ ಜಯಂತಿಯಂದು ಕಡೋಲಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾಪಣೆಗೊಳ್ಳುತ್ತಿರುವುದು ಖಷಿ ತಂದಿದೆ ಎಂದು ಹೇಳಿದರು.

ಸಚಿವ ಸತೀಶ ಜಾರಕಿಹೊಳಿ, ಕೇಂದ್ರ ಮಾಜಿ ಸಚಿವ ಶರದ್ ಪವಾರ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿದರು.

ಶಾಸಕರಾದ ಗಣೇಶ ಹುಕ್ಕೇರಿ ಅಂಜಲಿತಾಯಿ ನಿಂಬಾಳ್ಕರ್, ಶ್ರೀಮಂತ ಪಾಟೀಲ್, ಲಕ್ಷ್ಮಿ ಹೆಬ್ಬಾಳಕರ್, ಮಹಾರಾಷ್ಟ್ರದ ‌ಶಾಸಕ ಸಂಧ್ಯಾತಾಯಿ, ಮಾಜಿ ಶಾಸಕ ಅನಿಲ್ ಲಾಡ್, ಕಡೋಲಿ ದುರದುಂಡೇಶ್ವರ ವಿರಕ್ತ ಮಠದ ಗುರುಬಸವಲಿಂಗ ಸ್ವಾಮೀಜಿ, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪ ಮೇಯರ್ ಮಧುಶ್ರೀ ಪೂಜಾರಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಲಕ್ಷ್ಮಣರಾವ್ ಚಿಂಗಳೆ, ಜಯಶ್ರೀ ಮಾಳಗಿ, ಸರಳಾ ಹಿರೇಕರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published.