ವಿವೇಕಾನಂದರ ಆದರ್ಶ ನಮ್ಮ ಯುವ ಜನಾಂಗಕ್ಕೆ ಮಾದರಿ: ನಾಗಪ್ಪ ಶೇಖರಗೋಳ


ಗೋಕಾಕ: ಸ್ವಾಮಿ ವಿವೇಕಾನಂದರ ಆದರ್ಶ ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಅವರ ದೇಶಪ್ರೇಮ, ಧಾರ್ಮಿಕ ಶೃದ್ಧೆ, ಆತ್ಮ ವಿಶ್ವಾಸ ಹಾಗೂ ಸೇವಾ ಮನೋಭಾವನೆ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಯುವ ಧುರೀಣ ನಾಗಪ್ಪ ಶೇಖರಗೋಳ ಹೇಳಿದರು.

ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರದಂದು ಜರುಗಿದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಯುವ ಸಮಾಜದ ಎದುರು ಬೆಟ್ಟದಷ್ಟು ಸವಾಲುಗಳಿವೆ. ಅನಿಶ್ಚಿತ ಭವಿಷ್ಯ ಯುವ ಸಮೂಹವನ್ನು ಕಾಡುತ್ತಿದೆ.ಯುವಕರು ಭ್ರಮಾಲೋಕದಲ್ಲಿ ವಿಹರಿಸದೇ ಸಾಮಾಜಿಕ ಮೌಲ್ಯ, ಕೌಟುಂಬಿಕ ಮೌಲ್ಯ ಹಾಗೂ ಭಾವನಾತ್ಮಕ ಸಂಬಂಧಗಳನ್ನು ಯಾವುದೇ ಕಾರಣಕ್ಕೂ ಬಲಿಕೊಡದೇ ಕ್ರಿಯಾಶೀಲ ಚಟುವಟಿಕೆಗಳಿಂದ ಕರ್ತವ್ಯ ಶೀಲರಾಗಿ ಜವಾಬ್ದಾರಿಯುತ ಪ್ರಜೆಗಳಾಗಿ ರಾಷ್ಟ್ರ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಅವರು ಹೇಳಿದರು.

ಅಮೇರಿಕಾದ ಚಿಕ್ಯಾಗೋ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಪ್ರಪಂಚದ ಸಮಸ್ತ ಧರ್ಮಗಳ ಮೂಲ ತತ್ವಗಳನ್ನು ಭಾರತದ ಧರ್ಮದೊಂದಿಗೆ ಹೋಲಿಸಿ ಧಾರ್ಮಿಕ ಸಮನ್ವಯತೆಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರ ವಿವೇಕ ವಾಣಿಗಳನ್ನು ಯುವ ಜನತೆ ಮನದಟ್ಟು ಮಾಡಿಕೊಂಡರೆ ರಾಷ್ಟ್ರೀಯ ಭಾವೈಕ್ಯತೆ, ಧಾರ್ಮಿಕ ಸ್ವಾತಂತ್ರ್ಯ, ಭಾವಿ ಭವಿಷ್ಯಕ್ಕೆ ಪುಷ್ಠಿ ನೀಡಿದಂತಾಗುತ್ತದೆ ಎಂದು ನಾಗಪ್ಪ ಶೇಖರಗೋಳ ಹೇಳಿದರು.

ಹಳ್ಳೂರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವಾಯ್.ಬಿ. ಕಳ್ಳಿಗುದ್ದಿ, ಶಿಕ್ಷಕ ಎ.ಎಂ. ಮೋಡಿ, ರಾಷ್ಟ್ರೀಯ ಕ್ರೀಡಾಪಟು ಪೈ.ಶಿವು ಕುಡ್ಡೆಮ್ಮಿ, ವಸಂತ ಹಮ್ಮನವರ, ದಲಿತ ಸಂಘಟನೆ ಮುಖಂಡ ರಮೇಶ ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ರಾಮು ಝಂಡೇಕುರುಬರ, ಎಂ.ಡಿ. ಪಾಟೀಲ, ಬಸು ಝಂಡೇಕುರುಬರ, ಬಸು ಗಲಗಲಿ, ನಂಜುಂಡಿ ಸರ್ವಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.