ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನಾಳೆ ಎಚ್.ಕೆ. ಪಾಟೀಲ ಅಧಿಕಾರ ಸ್ವೀಕಾರ


ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಣಿಯಾಗುತ್ತಿದ್ದು, ಇದರ ಮೊದಲ ಭಾಗವಾಗಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಕ್ಷದ ಹಿರಿಯ ಮುಖಂಡ ಎಚ್.ಕೆ. ಪಾಟೀಲ ನಾಳೆ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಹೊಸದಾಗಿ ರಚಿಸಲಾಗಿರುವ ಪ್ರಚಾರ ಸಮಿತಿ ಇತರ ಪದಾಧಿಕಾರಿಗಳೂ ನಾಳೆಯಿಂದಲೇ ಕಾರ್ಯೋನ್ಮುಖಲಾಗಲಿದ್ದಾರೆ ಎಂದು ಪಕ್ಷದ ಮುಖಂಡ ಬಿ.ಎಲ್. ಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರಮನೆ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜವಾಬ್ದಾರಿ ವಹಿಸಿಕೊಂಡ ನಂತರ ಅಧಿಕೃತ ಪ್ರಚಾರ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ.

ಉತ್ತಮ ಸ್ನೇಹಜೀವಿಯಾಗಿರುವ ಎಚ್.ಕೆ. ಪಾಟೀಲರು ಹಿರಿಯರು, ಸಾಕಷ್ಟು ಅನುಭವ ಹೊಂದಿದವರಾಗಿದ್ದು, ಅವರ ನೇತೃತ್ವದಲ್ಲಿ ನಡೆಯುವ ಪ್ರಚಾರದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದೂ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಯುಪಿಎ ನೇತೃತ್ವದಲ್ಲಿ ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲನ ನಡೆಸಿದ ಅಧಿಕಾರಾವಧಿಯಲ್ಲಿ ಆಗಿರುವ ಸಾಧನೆಗಳು, ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಸರಕಾರ ಮಾಡಿದ ಸಾಧನೆಗಳು ಹಾಗೂ ಪ್ರಸ್ತುತ ಸರಕಾರದ ಮುಂದಿರುವ ಯೋಜನೆಗಳು ಕುರಿತು ಮನೆ ಮನೆಗೆ ತೆರಳಿ ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಜನೇವರಿ 26 ರಿಂದ ಆರಂಭವಾಗಲಿದೆ ಎಂದೂ ಅವರು ವಿವರಿಸಿದರು.

ಕಳೆದ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ. 38 ರಷ್ಟು ಹೆಚ್ಚಿನ ಮತಗಳು ಬಂದಿದ್ದರೂ ಅವು ಶಾಸಕರ ರೂಪದಲ್ಲಿ ಪರಿವರ್ತನೆಯಾಗಲಿಲ್ಲ. ಇದಕ್ಕೆ ಪಕ್ಷದ ಸಾಧನೆಗಳನ್ನು, ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ನಾವು ಸ್ವಲ್ಪ ಎಡವಿರುವ ಸಾಧ್ಯತೆ ಇರಬಹುದು. ಆದರೆ, ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಿ ಪರಿಣಾಮಕಾರಿಯಾಗಿ ಜನರಿಗೆ ಸಾಧನೆ, ಯೋಜನೆಗಳನ್ನು ಮುಟ್ಟಿಸಲಾಗುವುದು ಎಂದು ಅವರು ತಿಳಿಸಿದರು.

ನಾಳೆಯ ಕಾರ್ಯಕ್ರಮದಲ್ಲಿ ಎಲ್ಲ 224 ಕ್ಷೇತ್ರಗಳು ಮತ್ತು 175 ತಾಲೂಕುಗಳಿಂದ ಪಕ್ಷದ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ಸಿನವರು ಸಾಕಷ್ಟು ಕೆಲಸ ಮಾಡಿದ್ದರೂ ಸಹಿತ ಪ್ರಚಾರ ತೆಗೆದುಕೊಂಡಿದ್ದು ಕಡಿಮೆ. ಆದರೆ, ಬಿಜೆಪಿಯವರು ಹತ್ತು ಪೈಸೆ ಕೆಲಸ ಮಾಡಿ ಒಂದು ರೂಪಾಯಿನಷ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಎಂದು ಅವರು ಟೀಕಿಸಿದರು.

ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ ಭದ್ರವಾಗಿದ್ದು, ರೆಸಾರ್ಟ್ ರಾಜಕೀಯ ಮಾಡುವಂತಹ ಪ್ರಸಂಗ ಬಿಜೆಪಿಯವರಿಗೆ ಏಕೆ ಅನಿವಾರ್ಯವಾಯಿತೋ ಗೊತ್ತಾಗಲಿಲ್ಲ ಎಂದು ಅವರು ಛಾಟಿ ಬೀಸಿದರು.

ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎ.ಎಂ. ಹಿಂಡಸಗೇರಿ ಮತ್ತು ಇತರರೂ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published.