ಮೆತಗಲ್ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ತನಿಖೆಗೆ ರೈತ ಸಂಘಟನೆಗಳಿಂದ ಮನವಿ

ಮೆತಗಲ್ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ತನಿಖೆಗೆ ರೈತ ಸಂಘಟನೆಗಳಿಂದ ಮನವಿ


ಕೊಪ್ಪಳ: ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದಲ್ಲಿ ಆರು ಜನರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಬರಪರಿಹಾರ ಕಾಮಗಾರಿ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ರೈತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮೆತಗಲ್ ಗ್ರಾಮದ ರೈತ ಶೇಖರಯ್ಯ ಕುಟುಂಬವು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದೆ. ಸಾಲದ ತೊಂದರೆಯಿಂದ ತನ್ನ ಪಾಲಿನ ಆಸ್ತಿ ಮಾರಾಟಕ್ಕೆ ಯತ್ನಿಸಿದ್ದಾನೆ. ಮೂರನೆಯ ಮಗಳ ಮದುವೆಗೆ ಸಾಲ ಕೇಳಿದರೂ ಸಹ ದೊರೆತಿಲ್ಲ. ಶೇಖರಯ್ಯ ಸಹೋದರರು ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ತಹಸೀಲ್ದಾರ ಈ ಪ್ರಕರಣದ ಬಗ್ಗೆ ತಿರುಚಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಲ್ಲಿಸಿರುವ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸತ್ತವರು ಡೆತ್‌ನೋಟ್ ಬರೆದಿದ್ದಾರೆಂದು ಹೇಳಲಾಗಿದ್ದು, ಪೊಲೀಸರು ಇದನ್ನು ತಕ್ಷಣ  ಬಹಿರಂಗ ಪಡಿಸಬೇಕು. ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಮಡಿದವರ ಕುಟುಂಬದವರಿಗೆ ಅಗತ್ಯ ನೆರವು ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಬರ ಆವರಿಸಿದ್ದು, ಜಾನುವಾರು ಸ್ಥಿತಿ ದಿನಕಳೆದಂತೆ ಗಂಭೀರವಾಗುತ್ತಿದೆ. ಕುಡಿವ ನೀರಿಗೆ ಹಾಹಾಕಾರ ಶುರುವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಸ್ಪಂದಿಸಬೇಕು. ಅಗತ್ಯವಿರುವ ಕಡೆ ಮೇವು ಬ್ಯಾಂಕ್ ಹಾಗೂ ಗೋಶಾಲೆ ಆರಂಭಿಸಿ ಜನರಿಗೆ ನೆರವಾಗಬೇಕು ಎಂದು ನಜೀರ್ ಸಾಬ ಮೂಲಿಮನಿ, ಭಾರದ್ವಜ ಅವರ ನೇತೃತ್ವದ ರೈತರ ನಿಯೋಗ ಆಗ್ರಹಿಸಿದೆ.

Leave a Reply

Your email address will not be published.