ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯ: ಕೆಡಿಪಿ ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಸೂಚನೆ


ಕಾಲವಧಿಯೊಳಗೆ ಯೋಜನೆಗಳ ಕಾಮಗಾರಿ ಅನುಷ್ಠಾನಗೊಳಿಸಿ:  ಹೆಚ್.ವಿಶ್ವನಾಥ್ ರಡ್ಡಿ

– ಮೇವು ಬ್ಯಾಂಕ್ ಬದಲು ಗೋಶಾಲೆ ಆರಂಭಿಸಿ | ಕುಡಿಯುವ ನೀರಿನ ಸಮಸ್ಯೆಗೆ ಕ್ರಮ |

ಕೊಪ್ಪಳ: ಜಿಲ್ಲೆಯಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುಂತೆ ಹಾಗೂ ಆರ್ಥಿಕ ವರ್ಷದ ಒಳಗಾಗಿ ಜಾರಿಯಲ್ಲಿರುವ ಕಾರ್ಯಕ್ರಮ, ಹಾಗೂ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಕಾಲವಧಿಯೊಳಗೆ ಪೂರ್ಣಗೊಳಿಸುವುಂತೆ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥ್ ರಡ್ಡಿ ಹೇಳಿದರು.

ಜಿ.ಪಂ. ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರದಂದು ಜರುಗಿದ ಕೆ.ಡಿ.ಪಿ. (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುಂತೆ ಸೂಚನೆಯನ್ನು ನೀಡಿದರು.

ಜಿಲ್ಲೆಯಲ್ಲಿ ಈಗ ಆರಂಭಿಸಿರುವ ಮೇವು ಬ್ಯಾಂಕ್‌ಗಳ ಬದಲಾಗಿ ಜಿಲ್ಲೆಯಲ್ಲಿ ಗೋಶಾಲೆಗಳ ಸ್ಥಾಪನೆಗೆ ಪಶುಸಂಗೋಪನಾ ಇಲಾಖೆಯು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸೂಕ್ತ ಕ್ರಮ ವಹಿಸಬೇಕು. ರೈತರಿಗಾಗಿ ಇರುವ ಇಲಾಖೆಗಳ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವುಂತೆ ಹೇಳಿದ ಅವರು ಜಿಲ್ಲೆಯ ಶಾಸಕರು ಈಗಾಗಲೇ ಕಂದಾಯ ಸಚಿವರಿಗೆ ಮನವಿ ಮಾಡಿದ್ದು, ಸರ್ಕಾರದಿಂದ ಒಪ್ಪಿಗೆ ಬಂದ ತಕ್ಷಣ ಗೋಶಾಲೆ ಪ್ರಾರಂಭಿಸುವುಂತೆ ತಿಳಿಸಿದರು.

ಕುಡಿಯುವ ನೀರಿನ ಯೋಜನೆ ಪೂರ್ಣಕ್ಕೆ ತಾಕೀತು: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸದ್ಯ ಎಲ್ಲಿ ಸಮಸ್ಯೆಗಳಿವೇ ಎಂಬುದರ ಕುರಿತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಹಳ್ಳಿಗಳಲ್ಲಿ ಭೇಟಿ ನೀಡಿ ಪರಿಶೀಲಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆಗೆ ವಿವಿಧ ಕಾಮಗಾರಿಗಳನ್ನು ಸರ್ಕಾರವು ಚಾಲನೆ ನೀಡಿದ್ದು, ಅವುಗಳು ಯಾವ ಹಂತದಲ್ಲಿವೆ. ಬಾಕಿ ಉಳಿದ ಎಲ್ಲಾ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸುವುಂತೆ ತಾಕಿತ್ತು ಮಾಡಿದರು.

ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಗಿಯುತ್ತ ಬಂದಿದ್ದು ತಕ್ಷಣ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿಯಮಾನುಸಾರ ಯೋಜನೆಗಳನ್ನು ಜಾರಿಗೆ ತರುವುಂತೆ ಡಾ. ಬಿ.ಆರ್. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ದೇವರಾಜ ಅರಸು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳಿಗೆ ಸಭೆಯಲ್ಲಿ ಸೂಚನೆಯನ್ನು ನೀಡಲಾಯಿತು.

ಸ್ವಚ್ಛ ಭಾರತ್ ಮಿಷನ್ (ಗ್ರಾ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದ 2019ರ ವಾರ್ಷಿಕ ಕ್ಯಾಲೇಂಡರ್‌ನ್ನು ಇದೇ ಸಂದರ್ಭದಲ್ಲಿ ಅಧ್ಯಕ್ಷರು ಬಿಡುಗಡೆ ಮಾಡಿದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು : ಸಭೆಗೆ ಸರಿಯಾಗಿ ಮಾಹಿತಿ ನೀಡಿದ ಹಾಗೂ ಇಲಾಖೆಗಳ ಕಾರ್ಯಕ್ರಮದ ಬಗ್ಗೆ ಸರಿಯಾಗಿ ದಾಖಲೆಗಳನ್ನು ಒದಗಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಅಧ್ಯಕ್ಷ ಹೆಚ್.ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು. ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಸಭಗೆ ಹಾಗೂ ಸದಸ್ಯರಿಗೆ ಮಾಹಿತಿಯನ್ನು ನೀಡಬೇಕು, ಜನಪ್ರತಿನಿಧಿಗಳು ಸೂಚಿಸುವ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುವುಂತೆ ಹೇಳಿದರು.

ಪ್ರಗತಿ ವರದಿಗಳನ್ನು ಕನ್ನಡದಲ್ಲಿ ಕಡ್ಡಾಯ : ಎಲ್ಲಾ ಇಲಾಖೆಗಳ ಪ್ರಗತಿ ವರದಿಗಳನ್ನು ಇನ್ನೂ ಮುಂದೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು. ಇಲಾಖೆಗಳ ವ್ಯವಹಾರಗಳನ್ನು ಕನ್ನಡದಲ್ಲಿ ಬಳಕೆ ಮಾಡಬೇಕು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆದೇಶಗಳನ್ನು ಅಧಿಕಾರಿಗಳು ತಪ್ಪದೇ ಪಾಲಿಸುವ ಮೂಲಕ ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಜಾರಿಗೆ ತರಬೇಕು – ಹೆಚ್.ವಿಶ್ವನಾಥ, ಅಧ್ಯಕ್ಷರು ಜಿ.ಪಂ.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೂಳಪ್ಪ ಹಲಗೇರಿ, ಹನುಮಂತಗೌಡ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‌ರಾಜಾ, ಉಪ ಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.